ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣದ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ವಿಷಯಗಳನ್ನು ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತಿದ್ದ ಚೀನಾ, ವಿಶ್ವಸಂಸ್ಥೆಯ ಹಕ್ಕುಪತ್ರ, ಭದ್ರತಾ ಮಂಡಳಿ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಪ್ರಕಾರ ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಮತ್ತು ಸರಿಯಾಗಿ ಬಗೆಹರಿಸಬೇಕು. ಕಾಶ್ಮೀರದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಿ ಹೇಳಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಭಾರತದ ಆಂತರಿಕ ಭಾಗ. ಇತ್ತೀಚೆಗೆ ಅಲ್ಲಿ ನಡೆದ ಘಟನೆಗಳು ಸಂಪೂರ್ಣವಾಗಿ ಭಾರತಕ್ಕೆ ಮಾತ್ರ ಸಂಬಂಧಿಸಿದ ವಿಷಯ. ಅದು ಚೀನಾಗೆ ಚೆನ್ನಾಗಿ ಅರಿವಿದೆ ಎಂದಿದ್ದಾರೆ.
ಭಾರತ ದೇಶದ ಸಾರ್ವಭೌಮತ್ವ ಮತ್ತು ಪ್ರಾಂತೀಯ ಆಂತರಿಕತೆಯನ್ನು ಬೇರೆ ದೇಶಗಳು ಗೌರವಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳಿಂದ ದೂರವಿರಿ ಎಂದು ಹೇಳಿದರು.ಕಳೆದ ತಿಂಗಳು ಭಾರತ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಅದನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡುವುದಾಗಿ ಹೇಳಿದ ನಂತರ ಭಾರತ ಮತ್ತು ಪಾಕ್ ಸಂಬಂಧ ಮತ್ತಷ್ಟು ಹದಗೆಟ್ಟುಹೋಗಿದೆ. ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾದ ಮಾತುಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಕಳೆದ ಆಗಸ್ಟ್ 5ರಂದು ಆದೇಶ ಹೊರಡಿಸಿತ್ತು. ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೂ ಅಲ್ಲದೆ ಜಮ್ಮು-ಕಾಶ್ಮೀರ ಸ್ಥಾನಮಾನ ರದ್ದತಿಯನ್ನು ಹಿಂತೆಗೆದುಕೊಳ್ಳುವವರೆಗೆ ಅದರ ಜೊತೆ ದ್ವಿಪಕ್ಷೀಯ ಮಾತುಕತೆಯೇ ಇಲ್ಲ ಎಂದು ಹೇಳಿದ್ದು ಅಲ್ಲಿನ ಭಾರತೀಯ ರಾಯಭಾರಿಯನ್ನು ಕೂಡ ಹೊರಹಾಕಿದೆ. ಆದರೆ ಮೋದಿ ಸರ್ಕಾರ ಇವ್ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವೇ ಇಲ್ಲ, ಈ ವಿಷಯವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯಗೊಳಿಸಬೇಕಾದ ಅಗತ್ಯವಿಲ್ಲ, ಇದು ಭಾರತದ ಆಂತರಿಕ ವಿಷಯ, ಇದರಲ್ಲಿ ನಮ್ಮ ಮತ್ತು ಪಾಕಿಸ್ತಾನ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ನಾವು ನಾವು ಮಾತನಾಡಿಕೊಳ್ಳುತ್ತೇವೆ, ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂದು ಹೇಳಿದೆ.
ಏನಿದು ಚೀನಾ-ಪಾಕಿಸ್ತಾನ ಕಾರಿಡಾರ್:
ಸಿಪಿಇಸಿ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ಕಾರಿಡಾರ್ ಅಥವಾ ವಲಯ ಚೀನಾ ಮತ್ತು ಪಾಕಿಸ್ತಾನ ನಡುವೆ ಆರ್ಥಿಕ ಮತ್ತು ಮೂಲಭೂತ ಸೌಕರ್ಯಗಳ ವೃದ್ಧಿಗೆ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು 2015ರಲ್ಲಿ ಆರಂಭವಾಗಿದೆ. ಈ ಕಾರಿಡಾರ್ ನಿರ್ಮಾಣ ಪೂರ್ಣಗೊಂಡರೆ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಲವು ದೇಶಗಳಿಗೆ ವ್ಯಾಪಾರ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದೊಂದು ಪಾಕಿಸ್ತಾನದ ಮಹತ್ವಾಕಾಂಕ್ಷೆಯ ಮೂಲಭೂತ ಸೌಕರ್ಯ ಯೋಜನೆಯಾಗಿದೆ. 46 ಬಿಲಿಯನ್ ಡಾಲರ್ ಆರಂಭಿಕ ಅಂದಾಜಿನ ವೆಚ್ಚದಲ್ಲಿ ಆರಂಭವಾದ ಯೋಜನೆ 2017ಕ್ಕೆ 62 ಬಿಲಿಯನ್ ಆಗಿತ್ತು. 2017ರಲ್ಲಿ ಭಾಗಶಃ ಕಾರ್ಯಾಚರಣೆ ಆರಂಭವಾಗಿ ಚೀನಾದ ಕಾರ್ಗೊ ಗ್ವಾಡರ್ ಬಂದರಿಗೆ ಹಡಗಿನಲ್ಲಿ ವಸ್ತುಗಳನ್ನು ತರಲಾಗಿತ್ತು. ಆದರೆ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಪಾಕಿಸ್ತಾನವನ್ನು ಮೈತ್ರಿ, ಬೃಹತ್ ಬಂಡವಾಳ ಹೂಡಿಕೆ, ಮೂಲ ಸೌಕರ್ಯ ಅಭಿವೃದ್ಧಿ, ವ್ಯಾಪಾರ, ವಾಣಿಜ್ಯೊ?ದ್ಯಮದ ನೆಪದಲ್ಲಿ ಚೀನಾ ತನ್ನ ಕಬ್ಜಕ್ಕೆ ತೆಗೆದುಕೊಳ್ಳುತ್ತಿರುವುದೆ ಎಂದು ಭಾರತ ಹೇಳುತ್ತಿದೆ. ಚೀನಾ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಅಕ್ರಮವಾಗಿ ಈ ಕಾರಿಡಾರ್ ಯೋಜನೆ ನಿರ್ಮಾಣ ಮಾಡುತ್ತಿದೆ. ಬೃಹತ್ ಆರ್ಥಿಕ ಕಾರಿಡಾರ್ ಮಾತ್ರವಲ್ಲದೆ, ಅಲ್ಲಿನ ಆರೋಗ್ಯ, ಶಿಕ್ಷಣ ಕ್ಷೆ?ತ್ರದಲ್ಲೂ ಕೈಯಾಡಿಸುತ್ತಿದೆ. ಭಾರಿ ಹೂಡಿಕೆ ಮಾಡುತ್ತಿದೆ. ಏಷ್ಯಾ ಖಂಡದಲ್ಲಿ ಭಾರತದ ಬೆಳವಣಿಗೆಯನ್ನು ಹತ್ತಿಕ್ಕಲು ತನ್ನ ಅಧಿಪತ್ಯ ಮೆರೆಯಲು ಪಾಕಿಸ್ತಾನವನ್ನು ದಾಳವಾಗಿ ಚೀನಾ ಬಳಸಿಕೊಳ್ಳುತ್ತಿದೆ ಎಂಬುದು ಭಾರತದ ಆರೋಪವಾಗಿದೆ.
ಚೀನಾ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿವಾದಾತ್ಮಕ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಬಾರದು. ಇದರಿಂದ ಭಾರತದ ಸಾರ್ವಭೌಮತೆಗೆ ಧಕ್ಕೆಯಾಗಲಿದೆ ಎಂದು ಭಾರತ ಎಚ್ಚರಿಕೆ ನೀಡಿದೆ.