ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ವೃತ್ತಿ ಪರಿಚಯ ಹಾಗೂ ಮಾಹಿತಿ ತಂತ್ರಜ್ಞಾನ ಮೇಳ ಅ.15 ಹಾಗೂ 16 ರಂದು ಕೊಡ್ಲಮೊಗರು ಶ್ರೀವಾಣೀವಿಜಯ ಹೈಸ್ಕೂಲಿನಲ್ಲಿ ನಡೆಯಲಿದೆ. ಇದರ ಪೂರ್ವಭಾವೀ ಸಿದ್ದತಾ ಸಭೆ ಶಾಲೆಯಲ್ಲಿ ಶನಿವಾರ ನಡೆಯಿತು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ.ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿ, ಉಪಸಮಿತಿಗಳನ್ನು ರಚಿಸಲಾಯಿತು.
ಶಾಲಾ ವ್ಯವಸ್ಥಾಪಕ ಶಂಕರಮೋಹನ್ ಪೂಂಜ ಉಪಸ್ಥಿತರಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಮಾಲುದ್ದೀನ್, ಉಪಾಧ್ಯಕ್ಷ ಹಮೀದ್ ಕಣಿಯೂರು, ಗ್ರಾ.ಪಂ.ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್, ಮುಖ್ಯೋಪಾಧ್ಯಾಯಿನಿ ಭಾರತಿ, ಗ್ರಾ.ಪಂ.ಸದಸ್ಯ ಗೋಪಾಲಕೃಷ್ಣ ಪಜ್ವ, ಹಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕ ಅನಸೂಯ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಯಕ್ರಮಗಳ ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಭಾರತಿ ಅವರನ್ನು ಆಯ್ಕೆಮಾಡಲಾಯಿತು. ಹೈಯರ್ ಸೆಕೆಂಡರಿ ವಿಭಾಗದ ಪ್ರಭಾರ ಪ್ರಾಂಶುಪಾಲ ಚಂದ್ರಕುಮಾರ್ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಲಾಯಿತು. ರಾಮಕೃಷ್ಣ ಭಟ್ ಸಭೆ ನಿರ್ವಹಿಸಿದರು.