ಮಂಜೇಶ್ವರ: ರಾಷ್ಟ್ರದ ಅಖಂಡತೆ, ಸಂಸ್ಕøತಿಯನ್ನು ಉಳಿಸುವಲ್ಲಿ ಮಾತೆಯರ ಪಾತ್ರ ಹಿರಿದು. ಆಧುನಿಕ ಕಾಲಘಟ್ಟದ ಇಂದು ಧಾರ್ಮಿಕತೆ, ಹಿಂದೂ ಆಚಾರ ವಿಚಾರಗಳನ್ನು ಉಳಿಸುವಲ್ಲಿ ಸ್ತ್ರೀಯರ ಕೊಡುಗೆ ಮಹತ್ತರವಾದುದು ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ತಿಳಿಸಿದರು.
ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿರುವ 39ನೇ ಸಾರ್ವಜನಿಕಶ್ರೀಗಣೇಶೋತ್ಸವದ ಅಂಗವಾಗಿ ಸೋಮವಾರ ರಾತ್ರಿ ನಡೆದ ಮಾತೆಯರ ಸಮಾವೇಶ "ಮಾತೃಸಂಗಮ" ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆಯ ಹರೆಯದ ಮಕ್ಕಳಿಗೆ ತಾಯಂದಿರು ನೀಡುವ ಸಂಸ್ಕಾರದ ಶಿಕ್ಷಣವು ಸಮಾಜಕ್ಕೆ ಆ ಮಕ್ಕಳು ಸ್ಪೂರ್ತಿಯಾಗುತ್ತಾರೆ. ತಾಯಿಯಲ್ಲಿ ಮಾತ್ರ ಧನಾತ್ಮಕ ಶಕ್ತಿ ಇದೆ. ರಾಷ್ಟ್ರ ಮತ್ತು ಮಾತೆ ಬೇರೆಬೇರೆಯಲ್ಲ. ದೇಶದ ಅಖಂಡತೆಯನ್ನು ಸಂರಕ್ಷಿಸಲು ನಮ್ಮೆಲ್ಲರ ಕೊಡುಗೆ ಸದಾ ಪುಟಿದೇಳುತ್ತಿರಬೇಕು ಎಂದು ಶ್ರೀಗಳು ಈ ಸಂದರ್ಭ ಆಶೀರ್ವಚನದಲ್ಲಿ ತಿಳಿಸಿದರು.
ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದ ಶ್ರೀಅಯ್ಯಪ್ಪ ಸೇವಾ ಮಾತೃ ಸಮಿತಿ ಅಧ್ಯಕ್ಷೆ ಚಂಚಲಾಕ್ಷಿ ಕಡಪ್ಪರ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಗ್ರಾ.ಪಂ. ಸದಸ್ಯೆ ಜಯಶರ್ಮಿಳಾ, ಕನಿಲ ಶ್ರೀಭಗವತೀ ಕ್ಷೇತ್ರದ ಮಹಿಳಾ ಸಂಘದ ಅಧ್ಯಕ್ಷೆ ವಿಮಲಾ ನಾರಾಯಣ್, ವಿಹಿಂಪ ಮಾತೃಮಂಡಳಿ ಮಂಜೇಶ್ವರ ಪ್ರಖಂಡ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರ, ಉದ್ಯಮಿಗಳಾದ ವಿಜಯಾ ನಾಯರ್, ಸಾನಿಕಾ ನರಸಿಂಹ ಕುಲಾಲ್, ಸೀಮಾ ಯಜ್ಞೇಶ್ ಶಿವತೀರ್ಥ ಪದವು, ಹರಿಣಾಕ್ಷಿ ಶಶಿಧರ ಶೆಟ್ಟಿ ಜಮ್ಮದಮನೆ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಶ್ರೀಅಯ್ಯಪ್ಪ ಸೇವಾ ಮಾತೃಸಮಿತಿ ಪದಾಧಿಕಾರಿಗಳಾದ ಜಯಲಕ್ಷ್ಮೀ ಕೃಷ್ಣ ಜಿ.ಮಂಜೇಶ್ವರ ಸ್ವಾಗತಿಸಿ, ಬಿ.ಎಂ.ಆಶಲತಾ ಪೆಲಪ್ಪಾಡಿ ವಂದಿಸಿದರು. ಅನುಷಾ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗೀತ್ ಸಂಗೀತ್ ಉಪ್ಪಳ ತಂಡದವರಿಂದ ಭಕ್ತಿ ರಸಮಂಜರಿ,ರಿದಂ ಕಲ್ಚರಲ್ ವಿಂಗ್ಸ್ ಮಂಜೇಶ್ವರ ಹಾಗೂ ಅರಸು ಡ್ಯಾನ್ಸ್ ಅಕಾಡೆಮಿ ಹೊರತಂದ "ನಮೋ ವಕ್ರತುಂಡ"ವೀಡಿಯೋ ಆಲ್ಬಂ ಧ್ವನಿ ಸುರುಳಿಯನ್ನು ವಿವಿಧ ಗಣ್ಯರು, ಚಿತ್ರ ನಟರ ಉಪಸ್ಥಿತಿಯಲ್ಲಿ ಬಿಡುಗಡೆಗೊಲಿಸಲಾಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.