ಕುಂಬಳೆ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎನ್‍ಡಿಎ ಚುನಾವಣಾ ಕಾರ್ಯಾಲಯದ ಉದ್ಘಾಟನೆ ಕುಂಬಳೆ ಮಾವಿನಕಟ್ಟೆಯಲ್ಲಿ ಭಾನುವಾರ ನೆರವೇರಿತು.
ಬಿಜೆಪಿ ಮಾಜೀ ರಾಜ್ಯಾಧ್ಯಕ್ಷ ಸಿ.ಕೆ.ಪದ್ಮನಾಭನ್ ಕಾರ್ಯಾಲಯವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಹಿರಿಯ ನೇತಾರರಾಗಿದ್ದ ಕೆ.ಜಿ.ಮಾರಾರ್ ಅವರ ಕಾಲದಿಂದಲೂ ಬಿಜೆಪಿಯ ಗೆಲುವನ್ನು ಸಹಿಸದ ಎಡ-ಬಲ ರಂಗಗಳು ಅಸಾಂವಿಧಾನಿಕ ವಿಧಾನಗಳ ಮೂಲಕ ಜೊತೆಯಾಗಿ ಜನರೆಡೆಯಲ್ಲಿ ಕಪೋಲಕಲ್ಪಿತ ಸುಳ್ಳುಗಳನ್ನು ಹಬ್ಬಿಸಿ ಅಸಂತುಷ್ಠಿಗೆ ಯತ್ನಿಸುತ್ತಿದೆ. ಬಿಜೆಪಿಯ ಬಗೆಗಿನ ವಿರೋಧ ರಾಜ್ಯದ ಒಟ್ಟು ಅಭಿವೃದ್ದಿಯನ್ನು ಕುಂಠಿತಗೊಳಿಸಿ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದರು. ಜಿಲ್ಲೆಯ ಅಭಿವೃದ್ದಿಗೆ ಯಾವ ಕಾಳಜಿಯನ್ನೂ ವಹಿಸದ ಎಡ-ಬಲ ರಂಗಗಳನ್ನು ಚುನಾಯಿಸದೆ ಸಮಾಜ, ರಾಜ್ಯ, ರಾಷ್ಟ್ರದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿಯನ್ನು ಆಯ್ಕೆಗೊಳಿಸುವಲ್ಲಿ ಪ್ರಜ್ಞಾವಂತ ನಾಗರಿಕರು ಜಾಗೃತರಾಗಿ ಮತದಾನಗೈಯ್ಯಬೇಕೆಂದು ಅವರು ಕರೆನೀಡಿದರು. ಪ್ರಸ್ತುತ ಬಿಜೆಪಿ ವರ್ಚಸ್ಸಿನಿಂದ ಪರಾಜಯದ ಭೀತಿಗೊಳಗಾಗಿರುವ ಒಂದಷ್ಟು ಘಾತುಕ ಶಕ್ತಿಗಳು ಶನಿವಾರ ರಾತ್ರಿ ಬಿಜೆಪಿ ಜಿಲ್ಲಾ ಕಾರ್ಯಾಲಯದ ಹಾನಿಗೆ ಯತ್ನಿಸಿದ್ದು, ಅಂತಹ ಯತ್ನಗಳಿಗೆ ಜನರು ಭೀತಿಗೊಳಬೇಕಾಗಿಲ್ಲ ಎಂದು ತಿಳಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶನ್, ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸಂಯೋಜಕ ಕೆ.ರಂಜಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ.ರಮೇಶ್, ಎ.ವೇಲಾಯುಧನ್, ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ, ಬಿ.ರವೀಂದ್ರನ್ ಉಪಸ್ಥಿತರಿದ್ದು ಮಾತನಾಡಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಸ್ವಾಗತಿಸಿ, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ನಾಯ್ಕಾಪು ವಂದಿಸಿದರು.