ಇಸ್ಲಾಮಾಬಾದ್: ಕಾಶ್ಮೀರ ಪಾಕಿಸ್ತಾನದ "ಜೀವನಾಡಿ" ಮತ್ತು ಅದರ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತದ ನಿರ್ಧಾರವು ದೇಶದ ಭದ್ರತೆ ಮತ್ತು ಸಮಗ್ರತೆಗೆ ಸವಾಲೊಡ್ಡುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ
ಆಗಸ್ಟ್ 5 ರಂದು ಭಾರತ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಕಾಶ್ಮೀರದ ಬಗ್ಗೆ ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಲು ವಿಶ್ವಸಂಸ್ಥೆಯಲ್ಲಿ ತಮ್ಮ ಸರ್ಕಾರವು ಪೂರ್ವಭಾವಿ ರಾಜತಾಂತ್ರಿಕ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಖಾನ್ ಹೇಳಿದ್ದಾರೆ. ಅವರು ಪಾಕಿಸ್ತಾನದ ಸೇನಾ ಹುತಾತ್ಮರ ದಿನದಂದು ತಮ್ಮ ಸಂದೇಶವನ್ನು ನೀಡುತ್ತಾ ಅವರು ಮಾತನಾಡಿದರು.
ಪಾಕಿಸ್ತಾನವು ಸೆಪ್ಟೆಂಬರ್ 6 ಅನ್ನು ಸೇನಾ ಮತ್ತು ಹುತಾತ್ಮರ ದಿನವಾಗಿ ಆಚರಿಸುತ್ತದೆ.1965ರ ಆ ದಿನ ಪಾಕ್ ಭಾರತದೊಡನೆ ಯುದ್ಧ ಹೂಡಿದ್ದಿತು. ":ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಅದರ ಜೀವನಾಡಿಯಾಗಿದೆ.ಹಾಗಾಗಿ ಅದರ ವಿಶೇಷ ಸ್ಥಾನಮಾನವನ್ನು ಬದಲಾಯಿಸಿರುವುದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಸವಾಲುಗಳನ್ನು ಒಡ್ಡುತ್ತದೆ" ಎಂದು ಖಾನ್ ಹೇಳಿದರು. ಭಾರತದ ಪರಮಾಣು ಸುರಕ್ಷತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ನಾನು ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದೇನೆ ... ಇದು ದಕ್ಷಿಣ ಏಷ್ಯಾ ಪ್ರದೇಶವನ್ನು ಮಾತ್ರವಲ್ಲದೆ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ವಿಷಯವಾಗಿದೆ ಎಂದು ಅವರು ಹೇಳಿದರು. ಭಾರತದ ಪರಮಾಣು ಸುರಕ್ಷತೆ ಬಗ್ಗೆ ಗಮನ ನೀಡಲು ವಿಫಲವಾಗಿದ್ದರೆ "ದುರಂತ" ನಡೆದ ಬಳಿಕ ಅದಕ್ಕೆ ವಿಶ್ವ ಸಮುದಾಯವೇ ಹೊಣೆಗಾರನಾಗಬೇಕಾಗುವುದು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ಪಾಕಿಸ್ತಾನವು ಯುದ್ಧವನ್ನು ಬಯಸುವುದಿಲ್ಲ ಎಂದು ನಾನು ಜಗತ್ತಿಗೆ ತಿಳಿಸಿದ್ದೇನೆ, ಆದರೆ ಅದೇ ಸಮಯದಲ್ಲಿ, ಪಾಕಿಸ್ತಾನವು ತನ್ನ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯಾದರೆ ಸಹಿಸಲು ಸಾಧ್ಯವಿಲ್ಲ"ಖಾನ್ ಹೇಳಿದ್ದಾರೆ.