ಪೆರ್ಲ: ಕನ್ನಡ ಭಾಷೆ ಕಾಸರಗೋಡಿನ ಮಣ್ಣಿನ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿಯೇ ಕಲಿಯುವುದು ಹಾಗು ವ್ಯವಹರಿಸುವುದರೊಂದಿಗೆ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೋರ್ವ ಕನ್ನಡಿಗರು ಮಾಡಬೇಕೆಂದು ಕನ್ನಡ ಹೋರಾಟ ಸಮಿತಿಯ ಎಣ್ಮಕಜೆ ಪಂಚಾಯತ್ ಕನ್ನಡಿಗರ ಸಭೆಯ ಅಧ್ಯಕ್ಷತೆ ವಹಿಸಿದ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ಅವರು ಹೇಳಿದರು. ಕನ್ನಡಿಗರ ಹಕ್ಕುಗಳನ್ನು ನಾವೆಲ್ಲರು ಸಂಘಟಿತರಾಗುವ ಮೂಲಕ ಪಡೆಯಬೇಕೆಂದು ತಿಳಿಸಿದರು.
ಪೆರ್ಲ ಶ್ರೀ ನಾರಾಯಣ ಹೈಸ್ಕೂಲ್‍ನಲ್ಲಿ ಜರಗಿದ ಸಭೆಯಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗು ಪರಿಹಾರಗಳ ಬಗ್ಗೆ ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ವಿವರಿಸಿದರು. ಹರೀಶ್ ಪೆರ್ಲ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಸತೀಶ್ ಪುಣಿಂಚಿತ್ತಾಯ, ರಾಜೇಂದ್ರ ಪೆರ್ಲ, ಶಾಲಾ ಪ್ರಬಂಧಕ ಪಿ.ಎಸ್. ವಿಶ್ವಾಮಿತ್ರ ಮೊದಲಾದವರು ಅಭಿಪ್ರಾಯ ಮಂಡಿಸಿದರು.
ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಪೆರ್ಲ ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ವಂದಿಸಿದರು.
ಎಣ್ಮಕಜೆ ಪಂಚಾಯತಿ ಹೋರಾಟ ಸಮಿತಿಯ ಅಧ್ಯಕ್ಷೆಯಾಗಿ ಆಯಿಷಾ ಪೆರ್ಲ, ಉಪಾಧ್ಯಕ್ಷರಾಗಿ ಬಿ.ಎಸ್.ಕಾಟುಕುಕ್ಕೆ, ಅಬ್ದುಲ್ ರಹಿಮಾನ್, ಕಾರ್ಯದರ್ಶಿಗಳಾಗಿ ಕೆ.ಬಾಲಕೃಷ್ಣ ಶೆಟ್ಟಿ, ಕಿರಣ್ ಶಂಕರ್ ಕೆ.ಎಸ್, ಸತೀಶ್ ಪುಣಿಂಚಿತ್ತಾಯ, ಕೋಶಾಧಿಕಾರಿಯಾಗಿ ಬಿ.ಎಸ್.ಗಾಂಭೀರ್ ಹಾಗು 25 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.