ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಅ.21 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಕುಂಟಾರು ರವೀಶ ತಂತ್ರಿ ಅವರನ್ನು ಕೊನೆಗೂ ಆಯ್ಕೆಮಾಡಿ ಘೋಶಿಸಲಾಗಿದೆ.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿರುವ ಕುಂಟಾರು ರವೀಶ ತಂತ್ರಿ ಅವರು ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಸಿದ್ದ ತಾಂತ್ರಿಕ ಮನೆತನವಾದ ಕುಂಟಾರಿನವರಾಗಿರುವ ತಂತ್ರಿಗಳು ಹಿಂದೂ ಐಕ್ಯವೇದಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪಾದಾರ್ಪಣೆಗೈದವರಾಗಿದ್ದಾರೆ.
ಯುಡಿಎಫ್ ತನ್ನ ಅಭ್ಯರ್ಥಿಯಾಗಿ ಮುಸ್ಲಿಂಲೀಗ್ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಖಮರುದ್ದೀನ್ ಹಾಗೂ ಎಲ್‍ಡಿಎಫ್ ಅಭ್ಯರ್ಥಿಯಾಗಿ ಶಂಕರ ರೈ ಮಾಸ್ತರ್ ಪುತ್ತಿಗೆ ಅವರನ್ನು ಈಗಾಗಲೇ ಘೋಶಿಸಿದ್ದು, ಸೋಮವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈವರೆಗೆ ಮಂಜೇಶ್ವರ ಉಪಚುನಾವಣೆಗೆ ಪಕ್ಷೇತರರಾಗಿ ಇಬ್ಬರು ನಾಮಪತ್ರ ಸಲ್ಲಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ ಹಾಗೂ ಬಿಜೆಪಿ ಮಧ್ಯೆ ನೇರ ಪ್ರತಿಸ್ಪರ್ಧೆ ಏರ್ಪಟ್ಟು ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ 89 ಮತಗಳಿಂದ ಸೋತಿದ್ದರು. ಯುಡಿಎಫ್ ಅಭ್ಯರ್ಥಿ ಪಿ.ಬಿ ಅಬ್ದುಲ್ ರಸಾಕ್ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮಧ್ಯೆ ಅನಾರೋಗ್ಯ ಕಾರಣ ಪಿ.ಬಿ ಅಬ್ದುಲ್ ರಸಾಕ್ ಕಳೆದ ವರ್ಷ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ಘೋಶಿಸಲಾಗಿದೆ.