ಬದಿಯಡ್ಕ: ಶೈವ ವೈಶ್ಣವ ಸಮನ್ವಯವಾದ ಅಯ್ಯಪ್ಪ ಸ್ವಾಮಿಯು ವ್ಯಕ್ತಿರೂಪವನ್ನು ಧರಿಸಿದ ಸಾಕ್ಷಾತ್ ಪರಮೇಶ್ವರನೇ ಆಗಿದ್ದಾನೆ. ಧರ್ಮದ ಶಾಸನವನ್ನು ಮುನ್ನಡೆಸುವವನೇ ಧರ್ಮಶಾಸ್ತ. ಅಂತಹ ಅಯ್ಯಪ್ಪನ ಮುಂದೆ ತೆರಳಲು ನಾವು ಯಾಕಾಗಿ ವ್ರತಮಾಡಬೇಕು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದ್ದು, ನಮ್ಮ ವ್ರತಾನುಷ್ಠಾನಗಳನ್ನು ಚಾಚೂ ತಪ್ಪದೆ ಆಚರಿಸಬೇಕು. ಭಾರತೀಯ ಸನಾತನ ಧರ್ಮ ಸಂಸ್ಕಾರದ ಕುರಿತು ನಮ್ಮ ವಿಶ್ವಾಸ, ಆಚಾರದ ಹಿಂದೆ ಪೌರಾಣಿಕ ಹಿನ್ನೆಲೆಯಿದೆ. ಅಯ್ಯಪ್ಪ ಸ್ವಾಮಿಯ ಕುರಿತು ಚರಿತ್ರೆಯಲ್ಲಿರುವುದನ್ನು ಆಧುನಿಕ ಕಾಲದಲ್ಲಿ ಪರಿಗಣಿಸಬೇಕಾಗಿದೆ. ಧರ್ಮದ ಸಂರಕ್ಷಣೆಗಾಗಿ ದೇವತಾ ಶಕ್ತಿಗಳು ವಿವಿಧ ಅವತಾರಗಳಾಗಿ ಜನ್ಮತಾಳಲ್ಪಟ್ಟಿವೆ ಎಂದು ಹಿಂದೂ ಐಕ್ಯವೇದಿಯ ಪ್ರವೀಣ್ ಕೋಡೋತ್ ಹೇಳಿದರು.
ಭಾನುವಾರ ರಾತ್ರಿ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಧಾರ್ಮಿಕ ಭಾಷಣ ಮಾಡಿದರು.
ವ್ರತಾನುಷ್ಠಾನವನ್ನು ಯಾಕೆ ಮಾಡಬೇಕು ಎಂಬುದನ್ನು ನಮ್ಮೊಳಗೇ ಪ್ರಶ್ನಿಸಬೇಕಾಗಿದೆ. ಈಗ ನವರಾತ್ರಿ ಕಾಲವಾಗಿದೆ. ನವರಾತ್ರಿ ವ್ರತದ ಪ್ರಾಧಾನ್ಯತೆಯನ್ನು ನಮ್ಮ ಮಕ್ಕಳಿಗೆ ತಿಳಿಸುವುದರೊಂದಿಗೆ ನಾವೂ ಮಾಡಬೇಕು. 33 ಕೋಟಿ ದೇವತೆಗಳನ್ನು ಪೂಜಿಸುವ ಹಿಂದೂ ಸಮಾಜವು ಕಲಿಯುಗವರದನಾಗಿ ಅಯ್ಯಪ್ಪ ಸ್ವಾಮಿಯನ್ನು ಆರಾಸುತ್ತಿದ್ದೇವೆ. ಅಯ್ಯಪ್ಪ ಸ್ವಾಮಿಯ ಆಚಾರ ಅನುಷ್ಠಾನಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅವರು ತಿಳಿಸುತ್ತಾ ಅಯ್ಯಪ್ಪನ ಜೀವನ ಚರಿತ್ರೆಯನ್ನು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಕ್ಕೆ ಅದ್ಧೂರಿಯ ಸ್ವಾಗತವನ್ನು ನೀಡಲಾಯಿತು. ಬಾಲಕೃಷ್ಣ ಗುರುಸ್ವಾಮಿ ಪೊಯ್ಯಂಕಡ ಅವರು ದೀಪ ಪ್ರಜ್ವಲನೆಗೈದರು. ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಶುಭಾಶಂಸನೆಗೈದು ಮಾತನಾಡಿ ಭಗವಂತ ಯಾವಾಗಲೂ ನಿತ್ಯ ಬ್ರಹ್ಮಚಾರಿಯಾಗಿದ್ದಾನೆ. ಶ್ರೀಮಂತನಾಗಲೀ, ಬಡವನಾಗಲೀ ಎಲ್ಲರ ಮನೆಯಲ್ಲೂ ಅಯ್ಯಪ್ಪ ನೆಲೆನಿಂತಿದ್ದಾನೆ. ಎಲ್ಲರ ಮನದಲ್ಲಿರುವ ಅಯ್ಯಪ್ಪ ಸ್ವಾಮಿಯ ಸಾನ್ನಿಧ್ಯಕ್ಕೆ ಧಕ್ಕೆ ಬಾರದಂತೆ ನಾವೆಲ್ಲ ಒಂದಾಗಬೇಕು ಎಂದರು. ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯ ಸ್ವಾಗತ ಸಮಿತಿ ಜಿಲ್ಲಾ ಅಧ್ಯಕ್ಷ ಶಶಿಧರ ಶೆಟ್ಟಿ, ತಾಲೂಕು ಅಧ್ಯಕ್ಷ ಸುರೇಶ್, ಕುಂಞÂಕಣ್ಣ ಗುರುಸ್ವಾಮಿ ಚುಕ್ಕಿನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಪ್ರಸಾದ್ ರೈ ಸ್ವಾಗತಿಸಿ, ನ್ಯಾಯವಾದಿ ಗಣೇಶ್ ವಂದಿಸಿದರು. ಕಿನ್ನಿಮಾಣಿ ಪೂಮಾಣಿ ಭಜನಾ ಸಂಘದವರಿಂದ ಭಜನೆ ನಡೆಯಿತು.