ಬದಿಯಡ್ಕ: ಪರಸ್ಪರ ಸಹೋದರತೆಯ ಭಾವನೆಯಿಂದ ಒಂದೇ ವೇದಿಕೆಯಲ್ಲಿ ನಿಲ್ಲಲು ಸಂಘಟನೆಯು ಪ್ರಧಾನ ಕಾರಣವಾಗಿದೆ. ವೃತ್ತಿಯಲ್ಲಿ ಸ್ಪರ್ಧಾತ್ಮಕ ಧೋರಣೆಯನ್ನು ತೋರದೆ ಏಕೀಕರಣವನ್ನು ಕಾಯ್ದುಕೊಂಡರೆ ಮಾತ್ರ ಭವಿಷ್ಯವಿದೆ. ಸಂಘಟನಾತ್ಮಕ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಕೇರಳ ಐಯರ್ನ್ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಘಟಕ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ ದಿನೇಶನ್ ಅಭಿಪ್ರಾಯಪಟ್ಟರು.
ಕೇರಳ ಐಯರ್ನ್ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಘಟಕ ಅಸೋಸಿಯೇಶನ್‍ನ ಬದಿಯಡ್ಕ ವಲಯ ಮಹಾಸಭೆಯನ್ನು ಬದಿಯಡ್ಕ ರಾಮಲೀಲ ಸಭಾ ಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಿಕ ಕಳಕಳಿಯಿಂದ ಸಂಘಟನೆಯು ಅನೇಕರಿಗೆ ಸಹಾಯಹಸ್ತವನ್ನು ನೀಡಿದೆ. 600 ಕ್ಕೂ ಹೆಚ್ಚು ಮಂದಿ ಸದಸ್ಯರು ಜಿಲ್ಲೆಯಲ್ಲಿ ಇರುವ ಈ ಸಂಘಟನೆಗೆ ಇನ್ನೂ ಅನೇಕರು ಸೇರಿಕೊಳ್ಳಲಿದ್ದಾರೆ. ಇದಕ್ಕಾಗಿ ಸಂಘಟನೆಯ ಸದಸ್ಯರು ಮುತುವರ್ಜಿಯನ್ನು ವಹಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ ಅವರು ಸಂಚಾರಿ ವೆಲ್ಡಿಂಗ್ ಕಾರ್ಮಿಕರನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.
ಬದಿಯಡ್ಕ ವಲಯ ಅಧ್ಯಕ್ಷ ರಾಮಕೃಷ್ಣ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿ ಸುರೇಶ್ ಜಿ ಮಾತನಾಡಿ ಸಂಘಟನೆಯು ಜನರನ್ನು ಪರಸ್ಪರ ಒಂದುಗೂಡಿಸುವಲ್ಲಿ ಕಾರಣವಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿ ಅನುಭವಿಸಿದ ಸಂಕಷ್ಟಕ್ಕೆ ನೆರವಾಗಲು ಸಂಘಟನೆಗೆ ಸಾಧ್ಯವಾಗಿದೆ ಎಂದ ಅವರು ಸಂಘಟನೆಯ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ವೆಲ್ಡಿಂಗ್ ವೃತ್ತಿಯಲ್ಲಿ ಪಳಗಿದ ವಸಂತ ಕುಮಾರ್ ಗೋಳಿತ್ತಡ್ಕ ಮತ್ತು ಮೊಹಮ್ಮದ್ ಹಸನ್ ನೆಲ್ಲಿಕಟ್ಟೆ ಇವರನ್ನು ಸಂಘಟನೆಯ ವತಿಯಿಂದ ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ವಲಯ ಕಾರ್ಯದರ್ಶಿ ರಾಮ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಿಲ್‍ಫ್ರೆಡ್ ಡಿಸೋಜಾ ಲೆಕ್ಕಪತ್ರ ಮಂಡಿಸಿದರು. ಬ್ಲಾಕ್ ಅಧ್ಯಕ್ಷ ಸುರೇಶ್, ರಕ್ಷಾಕಾರಿ ರಾಧಾಕೃಷ್ಣ ಪರಪ್ಪಾಡಿ ಶುಭಾಶಂಸನೆಗೈದರು. ಬಳಿಕ ಸದಸ್ಯರೊಂದಿಗೆ ಸಂವಾದ ನಡೆಯಿತು. ವಲಯ ಜೊತೆಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿ, ಸದಸ್ಯ ಗಂಗಾಧರ ನಾಯಕ್ ವಂದಿಸಿದರು.