HEALTH TIPS

ಸಮರಸ ವರದಿಯ ಸಂಚಲನ- ಸರ್ಕಾರಿ ಶಾಲೆಗಳ ಶಿಕ್ಷಕರ ಹಾಜರಾತಿಗೆ ಪಂಚಿಂಗ್ ವ್ಯವಸ್ಥೆ ಕಲ್ಪಿಸಿ: ಸಾರ್ವಜನಿಕ ವಲಯದಿಂದ ಒತ್ತಾಯ

     
       ಮಂಜೇಶ್ವರ:  ಜಿಲ್ಲೆಯ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತಡವಾಗಿ ಶಾಲೆಗೆ ತಲುಪಿ ಪಠ್ಯ ಮತ್ತು ಪಠ್ಯೇತರ  ವಿಷಯಗಳ ನಿರ್ವಹಣೆಯಲ್ಲಿ ಆಲಸ್ಯವನ್ನು ತೋರುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿದೆ ಎಂದು ಕೆಲವು ದಿನಗಳ ಹಿಂದೆ(ಆಗಸ್ಟ್ 30)  ವಿಜಯವಾಣಿ ಸಮಗ್ರ ವರದಿಯನ್ನು ಪ್ರಕಟಿಸಿರುವ ಬೆನ್ನಿಗೆ ಶೈಕ್ಷಣಿಕ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
      ವರದಿಯ ಹಿನ್ನೆಲೆಯಲ್ಲಿ ಜಿಲ್ಲಾ ವಿದ್ಯಾಧಿಕಾರಿಗಳು ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ಮಂಗಳವಾರ ಹಲವು ಮಂಜೇಶ್ವರದ ಹಲವು ಶಾಲೆಗಳಿಗೆ ದಾಳಿ ನಡೆಸಿರುವ ಬಗ್ಗೆ ಕೂಡಾ ಮಾಹಿತಿ ಲಭಿಸಿದೆ. ಈ ಪೈಕಿ ಸರ್ಕಾರಿ ಅನುದಾನಿತ ಶಾಲೆಯೊಂದಕ್ಕೆ ದಾಳಿ ನಡೆಸಿದಾಗ ಮುಖ್ಯೋಪಾಧ್ಯಾಯರುಗಳ ಸಹಿತ ಸುಮಾರು 13 ಮಂದಿ ಶಿಕ್ಷಕರು ಕರ್ತವ್ಯದ ಸಮಯದಲ್ಲಿ ಇಲ್ಲದಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ಮಾಧ್ಯಮಗಳಿಂದ ದೂರವಿರಿಸಲಾಗಿದೆ. ಕರ್ತವ್ಯ ಸಮಯಕ್ಕೆ ಸರಿಯಾಗಿ ತಲುಪದವರ ಹೆಸರನ್ನು ದಾಖಲಿಸಿ ಹೋಗಿರುವ ಬಗ್ಗೆಯೂ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಮಾತ್ರವಲ್ಲದೆ ಅನುದಾನಿತ ಶಾಲೆಯ ಶಿಕ್ಷಕರುಗಳು ಕೂಡಾ ಶಾಲೆಗೆ ತಡವಾಗಿ ತಲುಪುತ್ತಿರುವುದಾಗಿ ತಿಳಿದುಬಂದಿದೆ.
      ವಿಜಯವಾಣಿ ವರದಿ ಪ್ರಕಟವಾದ ಮರು ದಿನ ಗಡಿ ಪ್ರದೇಶದ ಶಾಲೆಯೊಂದರ ಅಧ್ಯಾಪಕ ಬಳಿಗ್ಗೆ 10.25 ಕ್ಕೆ ಬಸ್ಸಿನಿಂದ ಇಳಿದು ಬಳಿಕ ಆಟೋ ರಿಕ್ಷಾ ಮೂಲಕ ಸಾಗಿ 10.30 ಕ್ಕೆ ಶಾಲೆಗೆ ತಲುಪಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳೊಬ್ಬರು ಮಾಹಿತಿ ನೀಡಿದ್ದಾರೆ. ಜೊತೆಗೆ ಮಂಗಳವಾರ ಕೂಡಾ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಬಂದಿಳಿದುದನ್ನು ಗಮನಿಸಿದ ಶಿಕ್ಷಕರು ಅಲ್ಲಿಂದಲೇ ಆಟೋ ರಿಕ್ಷಾ ಹತ್ತಿ ಬೇಗ ಬೇಗನೇ ಆಯಾ ಶಾಲೆಗೆ ತಲಪಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.
    ಕ್ಯಾಮರಾ ಕಣ್ಣಿಗೆ ಆಗ್ರಹ:
      ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಾರದೇ ಇರುವುದರಿಂದ ಹಾಗೂ ಅವಧಿಗೆ ಮೊದಲೇ ತೆರಳುತ್ತಿರುವುದರಿಂದ ಸರಿಯಾಗಿ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಇದರಿಂದ ಪಠ್ಯ ವಿಷಯದಲ್ಲಿ ಏರುಪೇರುಗಳಾಗುತಿದ್ದು, ಶಾಲೆಯ ಪ್ರಗತಿಗೆ ಮಾರಕವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪಂಚಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಿ.ಸಿ. ಕ್ಯಾಮರಾ ಕಣ್ಗಾವಲು ಅಳವಡಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
      ಶಿಕ್ಷಕರ ಈ ರೀತಿಯ ಆಲಸ್ಯಕ್ಕೆ ಶಾಲೆಗಳ ಮುಖ್ಯೋಪಾಧ್ಯಾಯರುಗಳ ಸಡಿಲಿಕೆ ಕೂಡಾ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ಆಡಿ ಕೊಳ್ಳುತಿದ್ದಾರೆ. ವಿಜಯವಾಣಿಯಲ್ಲಿ  ಬಂದ ವರದಿಯ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ, ವಿದ್ಯಾರ್ಥಿ ಸಂಘಟನೆಗಳು, ಹಳೆ ವಿದ್ಯಾರ್ಥಿ ಸಂಘಟನೆಗಳು ರಂಗಕ್ಕಿಳಿದಿವೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕಂಡುಕೊಂಡು ಅವ್ಯವಸ್ಥೆಯನ್ನು ಸರಿ ಪಡಿಸದೇ ಇದ್ದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲೂ ಪಂಚಿಂಗ್ ವ್ಯವಸ್ಥೆಯನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಯವರನ್ನು ಹಾಗೂ ಶಿಕ್ಷಣ ಸಚಿವರನ್ನು ಒತ್ತಾಯಪಡಿಸುವುದಾಗಿ ವಿಜಯವಾಣಿಗೆ ಮಂಜೇಶ್ವರ ಗ್ರಾಮಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಹಮಾನ್ ಉದ್ಯಾವರ ಹೇಳಿಕೆ ನೀಡಿದ್ದಾರೆ.
     ಮಾಧ್ಯಮಗಳು ಸಾರ್ವಜನಿಕರಿಂದ ಅಥವಾ ಸಂಘಟನೆಗಳ, ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನಾಧರಿಸಿ  ವರದಿಯ ಮೂಲಕ ಸೂಚನೆಯನ್ನು ನೀಡಬಹುದೇ ಹೊರತು ತಪ್ಪಿಸ್ಥರನ್ನು ಪತ್ತೆ ಹಚ್ಚುವ ಹೊಣೆಗಾರಿಕೆ ಮಾಧ್ಯಮಗಳಿಗಿಲ್ಲ. ಆದರೆ ಇದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ಕಡಿವಾಣ ಹಾಕಬೇಕಾದ  ಶಿಕ್ಷಕರೊಬ್ಬರು ಖಚಿತ ಮಾಹಿತಿ ನೀಡಿದರೆ ಮಾತ್ರ ಕ್ರಮಕ್ಕೆ ಮುಂದಾಗುವುದಾಗಿ  ಹೇಳಿರುವುದು ಕೂಡಾ  ಅಪಹಾಸ್ಯಕ್ಕೀಡಾಗಿದೆ. ಒಂದು ಕಡೆಯಿಂದ ಸರ್ಕಾರ ಶಾಲೆಗಳನ್ನು ಉಳಿಸಲು ಹರಸಾಹಸ ಪಡುತ್ತಿರುವಾಗ ಸರ್ಕಾರದಿಂದ ವೇತನ ಪಡೆಯುತ್ತಿರುವ ಶಿಕ್ಷಕರು ತಡವಾಗಿ ತಲುಪುವಂತಹ ಆಲಸ್ಯ ಚಾಳಿಯ ಮುಂದುವರಿಕೆಯನ್ನು ಇನ್ನಾದರೂ ಸರ್ಕಾರ ಪರಿಗಣಿಸದಿದ್ದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಲು ಸಾಧ್ಯವಿಲ್ಲವೆಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries