ಗುವಾಹಟಿ: ಕೊನೆಗೂ ಅಸ್ಸಾಂ ರಾಷ್ಟ್ರೀಯ ನಾಗರಿಕ ದಾಖಲಾತಿ(ಎನ್ ಆರ್ ಸಿ)ಪಟ್ಟಿ ಹೊರಬಿದ್ದಿದೆ. ಅಂತಿಮ ವರದಿಯಲ್ಲಿ 19 ಲಕ್ಷದ 6 ಸಾವಿರದ 657 ನಾಗರಿಕರು ಭಾರತೀಯ ನಾಗರಿಕ ಸ್ಥಾನ ಕಳೆದುಕೊಂಡಿದ್ದಾರೆ.
ಅಸ್ಸಾಂ ಇಷ್ಟು ವರ್ಷಗಳ ಕಾಲ ಅಕ್ರಮ ವಲಸಿಗರ ನುಸುಳುವಿಕೆ ಸಮಸ್ಯೆಯಿಂದ ನಲುಗಿಹೋಗಿತ್ತು. ಸರ್ಕಾರಿ ಸೌಲಭ್ಯಗಳು ಭಾರತದ ಪ್ರಜೆಗಳಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಈ ಸಮಸ್ಯೆಗಳಿಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ ಎನ್ನಬಹುದು.
ಹಾಗಾದರೆ ವರದಿಯಲ್ಲಿ ಹೆಸರು ಇಲ್ಲದವರ ಪರಿಸ್ಥಿತಿ ಏನಾಗುತ್ತದೆ, ರಾತ್ರೋರಾತ್ರಿ ಅವರನ್ನು ಗಡೀಪಾರು ಮಾಡಲಾಗುತ್ತದೆಯೇ ಎಂಬ ಸಂದೇಹ ಕಾಡಬಹುದು. ನಾಗರಿಕ ದಾಖಲಾತಿ ಪಟ್ಟಿಯಲ್ಲಿ ಇಲ್ಲದವರು ರಾತ್ರಿ ಕಳೆಯುವುದರೊಳಗೆ ನೆಲೆ ಕಳೆದುಕೊಳ್ಳುವುದಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ದೀರ್ಘಕಾಲದವರೆಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯಬಹುದು, ಅದು ಮುಗಿಯಲು ಕೆಲವು ವರ್ಷಗಳೇ ಹಿಡಿಯಬಹುದು.
ವರದಿಯಲ್ಲಿ ಹೆಸರು ಇಲ್ಲದ ನಾಗರಿಕರನ್ನು ಕೂಡಲೇ ಬಂಧಿಸುವುದಿಲ್ಲ. ಅವರನ್ನು ಗಡೀಪಾರು ಕೂಡ ಮಾಡುವುದಿಲ್ಲ, ಇದು ಭಾರತದ ಆಂತರಿಕ ವಿಷಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದ್ದು ಬಾಂಗ್ಲಾದೇಶ ಸರ್ಕಾರ ಕೂಡ ಅದನ್ನೇ ಹೇಳಿದೆ.
ಇಷ್ಟೊಂದು ಮಂದಿ ವಲಸಿಗರನ್ನು ಬಂಧಿಸಿ ಇಡುವಷ್ಟು ಸೌಲಭ್ಯ, ಸೌಕರ್ಯ ಈಗ ಅಸ್ಸಾಂ ಸರ್ಕಾರದ ಬಳಿ ಕೂಡ ಇಲ್ಲ, ಪ್ರತ್ಯೇಕ ಬಂಧನ ಶಿಬಿರ ಇಲ್ಲ. ಈಗಾಗಲೇ ಘೋಷಿತ ವಿದೇಶಿಗರನ್ನು ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದ್ದು ಅವರೇ ತುಂಬಿ ತುಳುಕುತ್ತಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಸದ್ಯದಲ್ಲಿಯೇ ಗೊಯಲ್ಪರಾದಲ್ಲಿ ಬಂಧನ ಶಿಬಿರವೊಂದನ್ನು ತೆರೆಯಲಾಗುತ್ತದೆ. ಅಲ್ಲಿ ಹೆಚ್ಚೆಂದರೆ 3 ಸಾವಿರ ಮಂದಿಯನ್ನು ಬಂಧಿಸಿಡಬಹುದು. ಇಂತಹ 10 ಬಂಧನ ಶಿಬಿರ ತಾಣವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಸರ್ಕಾರ ಏನು ಹೇಳುತ್ತದೆ: ವಿದೇಶಿಯರ ನ್ಯಾಯಾಧೀಕರಣ, ವಲಸಿಗರ ಬಗ್ಗೆ ತನಿಖೆ ನಡೆಸಿ ತೀರ್ಪು ಕೊಡುವವರೆಗೆ ಅವರನ್ನು ಬಂಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ. ವಿದೇಶಿಯರ ನ್ಯಾಯಮಂಡಳಿಯಲ್ಲಿ ವಲಸಿಗರು ಪ್ರಶ್ನಿಸಬಹುದು. ಸರ್ಕಾರ ಅವರಿಗೆ ಉಚಿತವಾಗಿ ಕಾನೂನಿನ ನೆರವು ನೀಡಲಿದೆ. ಇಂದು ಅಂತಿಮ ವರದಿ ಪ್ರಕಟವಾದ 120 ದಿನಗಳೊಳಗೆ ಮೇಲ್ಮನವಿ ಸಲ್ಲಿಸಬೇಕು. ಮನವಿ ಸಲ್ಲಿಸಿದ ಆರು ತಿಂಗಳೊಳಗೆ ಕೇಸಿನ ತೀರ್ಪು ವಿಲೇವಾರಿಯಾಗಬೇಕು ಎಂದು ಅಸ್ಸಾಂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣ ತಿಳಿಸಿದ್ದಾರೆ.
ವಿದೇಶಿಯರ ನ್ಯಾಯಮಂಡಳಿಯಲ್ಲಿ ಕೂಡ ವಿದೇಶಿ ಪ್ರಜೆ, ಅಸ್ಸಾಂ ರಾಜ್ಯಕ್ಕೆ ಸೇರುವುದಿಲ್ಲ ಎಂದು ತೀರ್ಪು ಬಂದರೆ ಗುವಾಹಟಿ ಹೈಕೋರ್ಟ್ ಗೆ ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಏನೇನು ಸೌಲಭ್ಯಗಳಿಂದ ವಂಚಿತವಾಗುತ್ತಾರೆ?: ಅಸ್ಸಾಂ ನಾಗರಿಕ ದಾಖಲಾತಿ ಪಟ್ಟಿಯಿಂದ ಹೊರಬಿದ್ದವರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ, ಭೂ ಮಾಲೀಕತ್ವದ ಹಕ್ಕನ್ನು ಕೂಡ ಕಳೆದುಕೊಳ್ಳುತ್ತಾರೆ. ಇಲ್ಲಿನ ಸರ್ಕಾರಿ ಉದ್ಯೋಗಗಳು ಸಿಗುವುದಿಲ್ಲ ಮತ್ತು ಸರ್ಕಾರದಿಂದ ಬರುವ ಇತರ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಆದರೆ ಕೇಂದ್ರ ಸರ್ಕಾರ ನಾಗರಿಕತ್ವ(ತಿದ್ದುಪಡಿ)ಮಸೂದೆ 2016ನ್ನು ರಾಜ್ಯಸಭೆಯಲ್ಲಿ ಹೊರಡಿಸುವ ಸಾಧ್ಯತೆಯಿದೆ. ಇದರಿಂದ ಮುಸ್ಲಿಮೇತರ ವಲಸಿಗರಿಗೆ ಅನುಕೂಲವಾಗಬಹುದು. ಲೋಕಸಭೆಯಲ್ಲಿ ಇದು ಈಗಾಗಲೇ ಅನುಮೋದನೆಯಾಗಿದೆ.
ಅಸ್ಸಾಂನಲ್ಲಿರುವ ವಲಸಿಗರಿಗೆ ಕೊನೆಯ ಅಸ್ತ್ರ ಸುಪ್ರೀಂ ಕೋರ್ಟ್. ಪ್ರಸ್ತುತ ಅಸ್ಸಾಂನಲ್ಲಿ 100 ವಿದೇಶಿಯರ ನ್ಯಾಯಮಂಡಳಿಗಳಿವೆ, ಈ ಕಾನೂನು ಹೋರಾಟ ದೀರ್ಘಾವಧಿಯವರೆಗೆ ನಡೆಯುವ ಸಾಧ್ಯತೆಯಿರುವ ಕಾರಣ ಸರ್ಕಾರ ಇನ್ನೂ 200 ಇಂತಹ ನ್ಯಾಯಮಂಡಳಿ ಸ್ಥಾಪಿಸಲಿದೆ. ಅಷ್ಟಕ್ಕೂ ಎನ್ ಆರ್ ಸಿ ನವೀಕರಣ ಮಾಡಿದ್ದು ಅಸ್ಸಾಂನಲ್ಲಿ ಎಷ್ಟು ಮಂದಿ ಭಾರತೀಯರು ಇದ್ದಾರೆ ಎಂದು ಗುರುತಿಸಲೇ ಹೊರತು ಅಕ್ರಮ ವಲಸಿಗರ ಅಂಕಿಸಂಖ್ಯೆ ಬಗ್ಗೆ ತಿಳಿಯಲು ಅಲ್ಲ.