ಕಾಸರಗೋಡು: ಇಂದಿನಿಂದ ಆಚರಣೆ ತೊಡಗಲಿರುವ ಗೌರಿ- ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆ ಖರೀದಿ ಹಾಗೂ ಭರದ ಸಿದ್ಧತೆಗಳು ನಡೆದಿರುವುದು ಹಾಗೂ ಹರ್ಷ ವ್ಯಾಪಕ ಪ್ರಮಾಣದಲ್ಲಿ ಕಂಡುಬಂದಿದೆ.
ನಗರದ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಎಲ್ಲೆಡೆ ಹೂವು- ಹಣ್ಣುಗಳು, ಪೂಜಾ ಸಾಮಾಗ್ರಿಗಳು, ಗಣಪತಿ ಮೂರ್ತಿಗಳ ಖರೀದಿ ಭರಾಟೆ ಕಂಡುಬಂಡಿದೆ. ಹೊಸ ಬಟ್ಟೆಗಳ ಖರೀದಿ ಕೂಡಾ ಭಾರೀ ಜೋರಾಗಿ ನಡೆಯುತ್ತಿದೆ. ಈ ಬಾರಿ ಗೌರಿ- ಗಣೇಶ ಎರಡೂ ಹಬ್ಬಗಳು ಸೋಮವಾರವೇ ಬಂದಿರುವುದು ವಿಶೇಷವಾಗಿದೆ.
ನಗರದ ಗಣೇಶ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸ್ಥಳೀಯ ಯುವಕರ ತಂಡಗಳು, ಗಣೇಶೋತ್ಸವ ಸಮಿತಿಗಳು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ರಸ್ತೆಗಳಲ್ಲಿ ಪೆಂಡಾಲ್ ಹಾಕುವ ಕಾರ್ಯಗಳಲ್ಲಿ ತೊಡಗಿವೆ. ಈ ಬಾರಿ ರಾಜ್ಯ ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮದಿಂದ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿಯಂತ್ರಣಕ್ಕೆ ಬಂದಿದ್ದು, ಮಣ್ಣಿನ ಮೂರ್ತಿಗಳ ಮಾರಾಟ ಎಲ್ಲೆಡೆ ಹೆಚ್ಚಾಗಿ ಕಂಡುಬಂದಿದೆ.
ಕೆಲವು ಕಡೆ ಸ್ಥಳೀಯ ಸಂಸ್ಥೆಗಳೇ ಮಣ್ಣಿನ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ವತಿಯಿಂದಲೂ ಮಣ್ಣಿನ ಮೂರ್ತಿಗಳ ಉಚಿತ ವಿತರಣೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಹಲವು ಕೆರೆ-ಸಮುದ್ರ ಕಿನಾರೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಿಸರ್ಜನೆಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ.
ಸಾರ್ವಜನಿಕರು ನಿರ್ದಿಷ್ಟ ಸ್ಥಳದಲ್ಲಿ , ಇಲ್ಲವೇ ಸಂಚಾರಿ ವಾಹನಗಳ ತೊಟ್ಟಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವಂತೆ ಮನವಿ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದೆಲ್ಲೆಡೆ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಲವೆಡೆ ಶಾಂತಿ ಸಭೆಗಳನ್ನು ನಡೆಸಲಾಗಿದೆ.