ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಕೆಂಡ ಕಾರುತ್ತಿರುವ ಪಾಕಿಸ್ತಾನ, ಪದೇ ಪದೇ ಯುದ್ಧೋತ್ಸಾಹವನ್ನು ಪ್ರದರ್ಶಿಸುತ್ತಿದ್ದು, ಇದೀಗ ಮತ್ತೆ ತನ್ನ ಬೆದರಿಕೆಯ ತಂತ್ರವನ್ನು ಮುಂದುವರೆಸಿದೆ.
ಕಾಶ್ಮೀರದಲ್ಲಿ ಭಾರತ ದೌರ್ಜನ್ಯವೆಸಗುತ್ತಿದ್ದು, ಹಿಂದುತ್ವ ಹೇರುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಹೇಳಿದ್ದಾರೆ.
ಹಿಂದುತ್ವ ಹಾಗೂ ದೌರ್ಜನ್ಯಗಳಿಗೆ ಕಾಶ್ಮೀರ ಬಲಿಪಶುವಾಗುತ್ತಿದೆ. ಕಾಶ್ಮೀರ ಪಾಕಿಸ್ತಾನದ ಅಜೆಂಡಾವಾಗಿದೆ. ಪ್ರಸ್ತುತ ಭಾರತ ಸರ್ಕಾರ ಕಾಶ್ಮೀರ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರ ನಮಗೆ ಸವಾಲಾಗಿದೆ. ಕಾಶ್ಮೀರವನ್ನು ಒಬ್ಬಂಟಿಯಾಗಿ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ. ಕಟ್ಟಕಡೆಯ ಯೋಧ, ಗುಂಡು ಹಾಗೂ ಉಸಿರು ಇರುವವರೆಗೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಕಾಶ್ಮೀರಕ್ಕಾಗಿ ಪಾಕಿಸ್ತಾನ ಸೇನೆ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ. ಯುದ್ಧದ ಮೋಡ ಹಾಗೂ ಆತಂಕ ವಾತಾವರಣ ಸೃಷ್ಟಿಯಾಗಿದೆ. ಆದರೆ, ನಾವು ಶಾಂತಿಯನ್ನು ಬಯಸುತ್ತಿದ್ದೇವೆ. ಇಂದು ಕಾಶ್ಮೀರ ಆತಂಕದಲ್ಲಿ ಸುಡುತ್ತಿದೆ. ನಿಮ್ಮೊಂದಿಗೆ ನಾವಿದ್ದೇವೆಂಬುದನ್ನು ನಾನು ಕಾಶ್ಮೀರ ಜನತೆಗೆ ಭರವಸೆ ನೀಡುತ್ತೇನೆ. ಕಾಶ್ಮೀರಕ್ಕಾಗಿ ಯಾವುದೇ ಬಲಿದಾನಕ್ಕೂ ನಾವು ಸಿದ್ಧರಿದ್ದೇವೆಂದು ಹೇಳಿಕೊಂಡಿದ್ದಾರೆ.