ಬದಿಯಡ್ಕ: ಪಂಚಭೂತ ತತ್ವಗಳಿಂದ ಮನುಷ್ಯನ ದೇಹ ರಚನೆಯಾದಂತೆ, ಪಂಚಭೂತ ತತ್ವಗಳಿಂದ ನಿರ್ಮಾಣವಾದಂತಹ ಪೂಜಾ ಮಂದಿರಗಳು, ದೇವಗೃಹಗಳು ಶಕ್ತಿಯ ಅಸೀಮ ಕೇಂದ್ರ ಸ್ಥಳವಾಗಿದೆ. ಅಂತಹ ಕಡೆಗಳಿಂದ ಎಲ್ಲ ರೀತಿಯ ಸಕಾರಾತ್ಮ ಶಕ್ತಿಯನ್ನು ಸ್ವೀಕಾರಮಾಡಿಕೊಂಡು ನಾವು ದೈಹಿಕವಾದ, ಮಾನಸಿಕವಾದ ಆರೋಗ್ಯವನ್ನು ಸಂಪಾದಿಸಿಕೊಳ್ಳಬಹುದು ಎಂದು ಕವಿ, ಸಾಹಿತಿ ಹಾಗೂ ಆಕಾಶವಾಣಿ ಮಂಗಳೂರು ಇದರ ನಿವೃತ್ತ ನಿಲಯ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ತಿಳಿಸಿದರು.
ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಭಾನುವಾರ ನೂತನ ಗಣೇಶ ಗುಡಿಯ ಉದ್ಘಾಟನಾ ಸಮಾರಂಭ ಮತ್ತು 48 ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇವಸ್ಥಾನಗಳು, ಪೂಜಾಮಂದಿರಗಳು ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರಗಳು ಅಭಿವೃದ್ಧಿಯ ಜೊತೆಜೊತೆಗೆ ಸಾಮಾಜಿಕ ಅಭ್ಯುತ್ಥಾನದ ಕಡೆಗೆ ದೃಷ್ಟಿನೆಟ್ಟಿದೆ. ಎಲ್ಲ ರೀತಿಯ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮದ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಹ ಲಕ್ಷ್ಯವನ್ನು ಇಟ್ಟುಕೊಳ್ಳಲಾಗಿದೆ. ಭಜನಾ ಮಂದಿರಗಳಲ್ಲಿ ಬೇರೆ ಬೇರೆ ರೀತಿಯ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿರುವುದು ಯುವ ತಲೆಮಾರಿನ ವ್ಯಕ್ತಿತ್ವ ವಿಕಾಸಕ್ಕೆ ವೇದಿಕೆಯಾಗಿದೆ. ನಮ್ಮ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ದೈಹಿಕವಾದ ಮತ್ತು ಮಾನಸಿಕವಾದ ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ಎಲ್ಲ ರೀತಿಯ ಶ್ರದ್ಧಾಕೇಂದ್ರಗಳು ಭಾರತ ದೇಶದಲ್ಲಿ ಉದಿಸಿಬಂದಿವೆ ಎಂದು ಅವರು ತಿಳಿಸಿದರು.
ನಿವೃತ್ತ ಆರ್.ಡಿ.ಒ. ಎಂ.ಶ್ರೀಧರ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿನೋದ್ ಕುಮಾರ್ ಅರಿಮೂಲೆ, ನೀಲೇಶ್ವರ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಬಿ.ನರಸಿಂಹ ಶೆಣೈ ಸ್ವಾಗತಿಸಿ, ಉಪಾಧ್ಯಕ್ಷ ನ್ಯಾಯವಾದಿ ಬಿ.ಗಣೇಶ್ ವಂದಿಸಿದರು. ಕಾರ್ಯದರ್ಶಿ ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಿಸಿದರು.
ಅಪರಾಹ್ನ ಕರಿಂಬಿಲ ಲಕ್ಷ್ಮಣ ಪ್ರಭು ನಿರ್ದೇಶನ ಹಾಗೂ ನಿರೂಪಣೆಯಲ್ಲಿ ಯಕ್ಷಗಾನಾಮೃತ ಆಯೋಜಿಸಲಾಗಿತ್ತು. ಭಾಗವತರಾಗಿ ಬಲಿಪ ಶಿವಶಂಕರ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ಪುತ್ತೂರು ರಮೇಶ್ ಭಟ್, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ಅಡೂರು, ಉದಯ ಕಂಬಾರು ಪಾಲ್ಗೊಂಡರು.