ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ನಿಬರ್ಂಧಗಳ ಬಗ್ಗೆ ಮತ್ತು ಭಾರತೀಯ ಸೇನೆಯ ಕುರಿತು ಟ್ವೀಟ್ ಮಾಡಿದ್ದ ಜಮ್ಮು - ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ ನಾಯಕಿ ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಶೀದ್ ಅವರು ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಅವರು ದೂರು ನೀಡಿದ್ದರು. ಈ ದೂರಿನ ಅನ್ವಯ ದೆಹಲಿ ಪೊಲೀಸರು ಶೆಹ್ಲಾ ರಶೀದ್ ವಿರುದ್ಧ ಭಾರತೀಯ ದಂಡ ಸಂಹಿತೆ 124 ಎ, 153 ಎ, 153, 504, 505 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಸೇನೆಯ ಕುರಿತಾಗಿ ಶೆಹ್ಲಾ ರಶೀದ್ ಮಾಡಿದ ಆರೋಪ ಸಂಪೂರ್ಣ ಸುಳ್ಳಾಗಿದ್ದು, ತನ್ನ ಆರೋಪಕ್ಕೆ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಈ ಮಾಹಿತಿಯನ್ನು ಆಧರಿಸಿ ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಈ ಮೂಲಕ ಭಾರತದ ಹೆಸರಿಗೆ ಕಳಂಕ ತರಲಾಗಿತ್ತು. ಇದೀಗ ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡಿರುವುದು ತೃಪ್ತಿ ತಂದಿದೆ. ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಬಂಧನ ಆಗುವ ವಿಶ್ವಾಸ ಇದೆ" ಎಂದು ದೂರುದಾರ ವಕೀಲ ಅಲೋಕ್ ಶಿವಾಸ್ತವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯಾವುದೇ ಅಧಿಕಾರವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ಶಕ್ತಿ ಹೀನರನ್ನಾಗಿ ಮಾಡಲಾಗಿದೆ. ಎಲ್ಲವೂ ಅರೆ ಸೈನಿಕರ ಕೈಯಲ್ಲಿದೆ. ಸಿಆರ್ ಪಿಎಫ್ ಸಿಬಂಧಿ ಸೂಚನೆ ಮೇರೆಗೆ ಎಸ್.ಎಚ್.ಓ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಸಶಸ್ತ್ರ ಪಡೆಗಳು ರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿವೆ ಎಂದು ಶೆಹ್ಲಾ ರಶೀದ್ ಟ್ವೀಟ್ ಮೂಲಕ ಆರೋಪ ಮಾಡಿದ್ದರು. ರಶೀದ್ ಆರೋಪವನ್ನು ಭಾರತೀಯ ಸೇನೆ ತಳ್ಳಿಹಾಕಿದೆ.