ಪೆರ್ಲ: ಜಿಲ್ಲಾ ಸಾಕ್ಷರತಾ ಮಿಷನ್‍ನ ವತಿಯಿಂದ ನಡೆಸಲ್ಪಡುವ ಹಸಿರು ಮಲೆಯಾಳ(ಪಚ್ಚ ಮಲಯಾಳ) ಭಾಷಾ ತರಗತಿಯ ಉದ್ಘಾಟನೆಯು ಎಣ್ಮಕಜೆ ಗ್ರಾ.ಪಂ.ನ ಸಾಕ್ಷರತಾ ಸಮಿತಿ ವತಿಯಿಂದ ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಎಲ್ಲರಿಗೂ ಮಲೆಯಾಳ ಭಾಷೆಯ ಪ್ರಾಥಮಿಕ ಜ್ಞಾನ ಸಂಪನ್ನತೆಯನ್ನು ಗಳಿಸಿಕೊಳ್ಳಲು ಸಹಕಾರಿಯಾಗುವ ಈ ಯೋಜನೆಯಲ್ಲಿ ಎಣ್ಮಕಜೆಯಲ್ಲಿ ಸುಮಾರು 30 ಮಂದಿ ಹೆಸರು ನೊಂದಾಯಿಸಿದ್ದು ತರಗತಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಉದ್ಘಾಟಿಸಿ ಸರ್ಕಾರಿ ಹಾಗೂ ಸಾರ್ವತ್ರಿಕ ವಲಯದಲ್ಲಿ ಭಾಷಾ ಅರಿವು ಸಕಾಲಿಕವಾಗಿದ್ದು ಈ ನಿಟ್ಟಿನಲ್ಲಿ ಸಾಕ್ಷರತೆಯ ಯೋಜನೆ ಪೂರಕ ಎಂದರು.
ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾ.ಪಂ.ಸಹ ಕಾರ್ಯದರ್ಶಿ, ಸಾಹಿತಿ ಅಬ್ದುಲ್‍ಲತೀಫ್ ಪಿಯಂಕರ ವಹಿಸಿ ಅಕ್ಷರ ಅಭ್ಯಾಸ ಎಂಬುದು ಅರಿವಿನ ಮೂಲವಾಗಿದ್ದು ಸಂವಹನ ಮಾಧ್ಯಮಕ್ಕೆ ಭಾಷೆ ಅಗತ್ಯವಾಗಿದ್ದು ಇದಕ್ಕಾಗಿ ಮಲಯಾಳ ಕಲಿಕೆಗೆ ಸಾಕ್ಷರತೆ ಹಸಿರು ನಿಶಾನಿ ತೋರಿಸಿರುವುದು ಶ್ಲಾಘನೀಯ ಎಂದರು.ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲಾ ಶಿಕ್ಷಕ ಹರಿಪ್ರಸಾದ್ ಶೆಟ್ಟಿ,ಮಲೆಯಾಳ ಅಧ್ಯಾಪಿಕೆ ನಂದಿನಿ,ಪ್ರೇರಕ್ ಜಲಜಾಕ್ಷಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಪಚ್ಚ ಮಲೆಯಾಳ ಸಮಿತಿ ಕೇಂದ್ರ ಸಂಚಾಲಕ ಪರಮೇಶ್ವರ ನಾಯ್ಕ ಸ್ವಾಗತಿಸಿ. ಎಣ್ಮಕಜೆ ಗ್ರಾ.ಪಂ.ಸಾಕ್ಷರತಾ ಪ್ರೇರಕ್ ಆನಂದ ಕುಕ್ಕಿಲ ವಂದಿಸಿದರು.