ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಖ್ಯಾತ ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರು ಭಾನುವಾರ ಚಾಲನೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ 9.39 ರಿಂದ 10.25ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ದಸರಾ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಂಡಿದ್ದು, ನವ ವಧುವಿನಂತೆ ಕಂಗೊಳಿಸುತ್ತಿದೆ. 100 ಕಿಮೀ ಗಿಂತಲೂ ಹೆಚ್ಚು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾದಿಂದ ಕಂಗೊಳಿಸುತ್ತಿದೆ. ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಅರಮನೆ ಆವರಣದಲ್ಲಿ ಬನ್ನಿ ಪೂಜೆ ನೆರವೇರಿಸಿ, ಬೆಳಿಗ್ಗೆ 9.45ಕ್ಕೆ ರತ್ನ ಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಯಿತು.
ನಿನ್ನೆಯಿಂದ 10 ದಿನಗಳ ಕಾಲ ಅರಮನೆ ಸೇರಿದಂತೆ ಐತಿಹಾಸಿಕ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಹಾಗೂ ಮೈಸೂರಿನ ಬಹುಪಾಲು ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುತ್ತವೆ. ಜೊತೆಗೆ ಕುಸ್ತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೆಗಳು, ಚಲನಚಿತ್ರೋತ್ಸವ, ವಸ್ತು ಪ್ರದರ್ಶನ, ಪುಸ್ತಕ ಮೇಳ, ದಸರಾ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಇದು ದಸರಾ ಉತ್ಸವಕ್ಕೆ ಮತ್ತಷ್ಟು ರಂಗು ನೀಡಲಿವೆ.