ಮಂಜೇಶ್ವರ: ಮುಸ್ಲಿಂ ಲೀಗ್ ಮುಸ್ಲಿಂಮರಲ್ಲಿ ಗೊಂದಲ ಹಾಗೂ ಬೆದರಿಕೆ ತಂತ್ರಗಳ ಮೂಲಕ ಬಿಜೆಪಿ ವಿರುದ್ಧ ಕಪಟ ಹೇಳಿಕೆ ನೀಡಿ ಮುಸ್ಲಿಂಮರನ್ನು ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ನೇತಾರ ಫಝಲ್ ಅಸೈಗೊಳಿ ಆರೋಪಿಸಿದರು.
ವರ್ಕಾಡಿ ಪಂಚಾಯತಿ ಬಿಜೆಪಿ ನೇತೃತ್ವದಲ್ಲಿ ಭಾನುವಾರ ವರ್ಕಾಡಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮುಸ್ಲಿಂಲೀಗ್ ಹಲವು ವರ್ಷಗಳಿಂದ ಗೆಲುವು ಸಾಧಿಸಿದ ಮಂಡಲದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೋಮು ಭಾವನೆ ಕೆರಳಿಸಿ ಮತ ಸಂಗ್ರಹದ ಮೂಲಕ ಗೆಲ್ಲುವುದು ಅದರ ಕುತ್ಸಿತ ತಂತ್ರಗಾರಿಕೆಯಾಗಿದೆ. ಕಳೆದ ಬಾರಿ ನಕಲಿ ಮತ ಚಲಾಯಿಸಿ ಗೆದ್ದ ಮುಸ್ಲಿಂಲೀಗ್ ಈ ಬಾರಿಯೂ ನಿಧನಹೊಂದಿದವರ ಮತಗಳನ್ನು ಚಲಾಯಿಸದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಮುನ್ನೆಚ್ಚರಿಕೆ ನೀಡಿದರು.
ವಿದ್ಯಾವಂತ ಮುಸ್ಲಿಮರು ಬಿಜೆಪಿ ಪರವಾಗಿರುವುದು ವಿದೇಶಗಳಲ್ಲಿ ದುಡಿಯುವ ಇಲ್ಲಿನ ಬಂಧುಗಳಿಗೆ ಸ್ಪಷ್ಟ ಅರಿವಿದೆ. ಸುಷ್ಮಾ ಸ್ವರಾಜ್ ಸಚಿವರಾಗಿದ್ದಾಗ ಅನಿವಾಸಿ ಭಾರತೀಯರು ಮಾಡಿದ ಸಹಾಯ ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್, ಮುಖಂಡರಾದ ರವೀಶ ತಂತ್ರಿ ಕುಂಟಾರು, ಆದರ್ಶ ಬಿ.ಎಂ, ಚಂದ್ರಶೇಖರ್, ದೂಮಪ್ಪ ಶೆಟ್ಟಿ, ಗೋಪಾಲ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಜಿತ್ ಶೆಟ್ಟಿ ಸ್ವಾಗತಿಸಿ, ಜಗದೀಶ್ ಚೆಂಡೆಲ್ ವಂದಿಸಿದರು.