ಉಪ್ಪಳ: ಗಣಪತಿಯನ್ನು ನಾವು ಹಿಂದಿನಿಂದಲೂ ವಿಘ್ನಗಳನ್ನು ಕಳೆಯುವ ದೇವರೆಂದು ಆರಾಧಿಸುತ್ತೇವೆ. ಗಣವೆಂದರೆ ಗುಂಪು ಎಂಬ ಅರ್ಥ. ಆದುದರಿಂದ ಭಕ್ತರ ಗುಂಪಿಗೇ ಅವನು ಒಡೆಯ. ಗುಂಪು ಎಂದಾಗ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಭಿನ್ನ ಭಿನ್ನ ಅಭಿಪ್ರಾಯ ಹೊಂದಿರುವವರನ್ನು ಸಂಘಟಿಸಿ ಸಮಾಜೋನ್ನತಿಗೆ ಶ್ರಮಿಸಲು ಗಣಪನೇ ಪ್ರೇರಣೆ ಎಂದು ಬಾಯಾರು ಮುಳಿಗದ್ದೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಅವರು ಹೇಳಿದರು.
ಸಹಜ ವೈರಿಗಳಾದ ಹಾವು ಮತ್ತು ಇಲಿಗಳು ಗಣಪನೊಂದಿಗೆ ವೈರತ್ವ ಮರೆತು ಜೊತೆಯಾಗುತ್ತವೆ. ನಮ್ಮ ವೈಯಕ್ತಿಕ ಅಭಿಪ್ರಾಯ ಬೇಧಗಳನ್ನು ಬದಿಗಿಟ್ಟು ಉತ್ಸವವನ್ನು ಆಚರಿಸಿದರೆ ಅದು ಅರ್ಥಪೂರ್ಣ. ಮನುಷ್ಯ ದುರ್ಬಲ, ಆನೆ ಶಕ್ತಿಶಾಲಿ. ಆದುದರಿಂದ ಆನೆಯ ತಲೆಯುಳ್ಳ ಮನುಷ್ಯ ಶರೀರದ ಗಣಪನು ನಮ್ಮ ಅಲ್ಪತ್ವವನ್ನು ಪ್ರಕೃತಿಯ ಶ್ರೇಷ್ಠತೆಯನ್ನು ಮನಗಾಣಿಸುತ್ತಿದ್ದಾನೆ. ಇದನ್ನು ತಿಳಿದು ಎಲ್ಲರೊಂದಾಗಿ ನಮ್ಮ ಊರಿನ ಒಳಿತಿಗಾಗಿ ಶ್ರಮಿಸುವ ಎಂದು ಹೇಳಿದರು.
ಬಾಯಾರಿನ 36 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸರ್ಕಾರದ ನಿವೃತ್ತ ಹೆಚ್ಚುವರಿ ಕಾನೂನು ಕಾರ್ಯದರ್ಶಿ ಸೀತಾರಾಮ.ಎಂ, ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯರುಗಳಾದ ಕಿಶೋರ್ ಕುಮಾರ್ ಪೆರ್ವೊಡಿ, ಗಣೇಶ ಕುಲಾಲ್ ಹಾಗೂ ಬಾಯಾರು ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಬಂಧಕ ರಾಜೇಶ ಎನ್. ಉಪಸ್ಥಿತರಿದ್ದು ಮಾತನಾಡಿದರು. ಶಿವಪ್ಪ ಜೋಗಿ ಬಾಯಾರು ಸ್ವಾಗತಿಸಿ, ಗಣೇಶ ಚೇರಾಲು ವಂದಿಸಿದರು. ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಗಣೇಶ ವಿಗ್ರಹದ ಶೋಭಾಯಾತ್ರೆ ಹಾಗೂ ವಿಸರ್ಜನೆ ನಡೆಯಿತು.