HEALTH TIPS

ಕೊರಗ ಸಮುದಾಯವು ಮುಖ್ಯವಾಹಿನಿಗೆ ಬರಬೇಕು : ಡಾ ಡಿ.ಸಜಿತ್ ಬಾಬು- ಮಾಡತ್ತಡ್ಕ ಕೊರಗ ಕಾಲನಿಯ ಸಮಗ್ರ ಅಭಿವೃದ್ಧಿಗೆ ಕಾರ್ಯಸೂಚಿ


       ಬದಿಯಡ್ಕ: ಮಾಡತ್ತಡ್ಕ ಕೊರಗ ಕೋಲನಿಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಆಹಾರ ಭದ್ರತೆ ಹಾಗೂ ಆದಾಯವನ್ನು ಹತ್ತುಪಟ್ಟು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕುಲಕಸುಬಾದ ಬುಟ್ಟಿಹೆಣೆಯುವ ವೃತ್ತಿಗೆ ಅನುಕೂಲವಾಗುವಂತೆ ಕಾಡುಬಳ್ಳಿಗಳು ಸ್ಥಳದಲ್ಲೇ ಲಭ್ಯವಾಗುವಂತೆ ಅಗತ್ಯವುಳ್ಳ ಸೌಲಭ್ಯವನ್ನು ಒದಗಿಸಲಾಗುವುದು. ಕೊರಗ ಸಮುದಾಯವು ಎಲ್ಲ ಪಂಗಡಗಳಂತೆ ಮುಖ್ಯವಾಹಿನಿಗೆ ಬರಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ತಿಳಿಸಿದರು.
     ಕೃಷಿಇಲಾಖೆ, ಕೃಷಿಕರ ಅಭಿವೃದ್ಧಿ ಇಲಾಖೆ ಹಾಗೂ ಬದಿಯಡ್ಕ ಗ್ರಾಮಪಂಚಾಯಿತಿಯ ನೇತೃತ್ವದಲ್ಲಿ ಜಲ್‍ಶಕ್ತಿ ಅಭಿಯಾನ್ ಅಂಗವಾಗಿ ಗುರುವಾರ ನೀರ್ಚಾಲು ಸಮೀಪದ ಮಾಡತ್ತಡ್ಕ ಕೊರಗ ಕೋಲನಿಯಲ್ಲಿ ಫಲವೃಕ್ಷಗಳಾದ ಹಲಸು, ಮಾವು, ಗೇರು ಹಾಗೂ ಕಾಡುಬಳ್ಳಿ ಕುಕ್ಕುಸನ (ತುಳುವಿನ ಇಂಜಿರ, ಮಲಯಾಳಂನ ಪುಲ್ಲಾಂಜಿ) ಗಿಡವನ್ನು ಕಾಲನಿ ವಾಸಿಗಳಿಗೆ ವಿತರಿಸಿ ಅವರು ಮಾತನಾಡಿದರು.
     ಇಲ್ಲಿನ 9 ಕುಟುಂಬಗಳು ತಮ್ಮ ಜೀವನೋಪಾಯಕ್ಕೆ ದೂರದ ಕರ್ನಾಟಕದಿಂದ ಕಾಡುಬಳ್ಳಿಗಳನ್ನು ತರಬೇಕಾದ ಅನಿವಾರ್ಯತೆ ಇದೆ. ಇದನ್ನು ಮನಗಂಡು ಸಂಶೋಧನೆಗಳ ಮೂಲಕ ಕುಕ್ಕುಸನ(ಇಂಜಿರ)ವೆಂಬ ಕಾಡುಬಳ್ಳಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೃಷಿಯನ್ನು ಮಾಡುವ ಯೋಜನೆ ಇದಾಗಿದೆ. ಇದಲ್ಲದೆ ಇಲ್ಲಿ ಕರಕುಶಲ ವಸ್ತುಗಳ ನಿರ್ಮಾಣಕ್ಕೆ ತರಬೇತಿಯನ್ನೂ ನೀಡುವ ಮೂಲಕ ಇವರ ಸಮಗ್ರ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
     ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಮ್ಮ ಪ್ರದೇಶದಲ್ಲಿ ನೀರಿನ ಲಭ್ಯತೆಯ ಕೊರತೆಯು ಕಂಡುಬರುತ್ತಿದ್ದು, ಇದಕ್ಕಾಗಿ ಭೂಮಿಗೆ ನೀರಿಂಗಿಸುವ ಮೂಲಕ ಜಲಮೂಲಗಳನ್ನು ರಕ್ಷಿಸಬೇಕು. ಈ ಕೃಷಿ ಯೋಜನೆಯಿಂದ ಕೋಲನಿ ವಾಸಿಗಳು ಪ್ರಗತಿಯನ್ನು ಕಾಣಲಿ ಎಂದು ಅವರು ಹೇಳಿದರು.
      ಕೃಷಿಇಲಾಖೆಯ ಉಪನಿರ್ದೇಶಕ ಜೋನ್ ಜೋಸೆಫ್ ಮಾತನಾಡಿ ಪ್ರಾಕೃತಿಕವಾಗಿ ಲಭಿಸುತ್ತಿದ್ದ ಈ ಗಿಡವನ್ನು ಕೃಷಿಮಾಡಬಹುದು ಎಂದು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ. ಇದೊಂದು ನೂತನ ಆವಿಷ್ಕಾರವಾಗಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಡಿ.ಶಂಕರ ಮಾತನಾಡಿ ಕೋಲನಿವಾಸಿಗಳ ಜೀವನೋಪಯಕ್ಕಾಗಿ ಹಮ್ಮಿಕೊಂಡ ಈ ಯೋಜನೆಯನ್ನು ಸಮಗ್ರ ನಿರ್ವಹಣೆಯ ಮೂಲಕ ಯಶಸ್ವಿಗೊಳಿಸಲು ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ತನ್ಮೂಲಕ ಇಲ್ಲಿನ ಜನತೆಯು ಹೆಚ್ಚಿನ ಆದಾಯವನ್ನು ಗಳಿಸಿ ಇವರ ಜೀವನದಲ್ಲಿ ಬದಲಾವಣೆಯನ್ನು ಕಾಣಬೇಕು ಎಂದರು.
      ಜಿಲ್ಲಾ ಕೃಷಿ ಅಧಿಕಾರಿ ಮಧು ಜೋರ್ಜ್, ಬದಿಯಡ್ಕ ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಕಾರ್ಯದರ್ಶಿ ಪ್ರದೀಪ್, ಸದಸ್ಯರುಗಳಾದ ಜಯಶ್ರೀ, ಕೊರಗ ವಿಭಾಗ ಪ್ರೊಮೋಟರ್ ಗೋಪಾಲನ್, ಸಹಾಯಕ ಕೃಷಿ ಅಧಿಕಾರಿ ಜಯರಾಂ ಮತ್ತಿತರರು ಪಾಲ್ಗೊಂಡಿದ್ದರು. ಕೃಷಿಇಲಾಖೆಯ ಸಹಾಯಕ ಉಪನಿರ್ದೇಶಕ ಆನಂದ ಕೆ. ಸ್ವಾಗತಿಸಿ, ಬದಿಯಡ್ಕ ಕೃಷಿಭವನದ ಅಧಿಕಾರಿ ಮೀರಾ ವಂದಿಸಿದರು.
    ಅಭಿಮತ: 
    ಮುಂದಿನ ನಾಲ್ಕು ವರ್ಷಗಳಲ್ಲಿ ಈ ಯೋಜನೆಯು ಫಲಪ್ರದವಾಗಲಿದ್ದು ಇದಕ್ಕಾಗಿ ವಿವಿಧ ಇಲಾಖೆಗಳು ಉಸ್ತುವಾರಿ ವಹಿಸಲಿವೆ. ವಾರ್ಡು ಸದಸ್ಯ ಡಿ.ಶಂಕರ ಅವರು ಕಾಲನಿ ವಾಸಿಗಳ ಮನವೊಲಿಸಿ ಅವರಿಗೆ ಸ್ಥಳದಲ್ಲಿಯೇ ಕಾಡುಬಳ್ಳಿ ಲಭಿಸುವ ಕೃಷಿ ಯೋಜನೆಗೆ ಉತ್ತಮವಾಗಿ ಬೆಂಬಲವನ್ನು ನೀಡಿದ್ದಾರೆ. ದ್ರಾಕ್ಷೆ ಹಣ್ಣಿನ ಕೃಷಿಯಂತೆ ಈ ಕುಕ್ಕುಸನದ ಬಳ್ಳಿಯ ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುವುದು.
                    - ಡಾ.ಡಿ.ಸಜಿತ್ ಬಾಬು, ಜಿಲ್ಲಾಧಿಕಾರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries