ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮಗಳ ಅಂಗವಾಗಿ ಉಷ:ಕಾಲ ಪೂಜೆಯೊಂದಿಗೆ ಶ್ರೀ ಕ್ಷೇತ್ರದ ಮೊಕ್ತೇಸರ ವೇದಮೂರ್ತಿ ಎಸ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಶಿವರಾಜ ವಿ. ಅವರ ಸಹಕಾರದೊಂದಿಗೆ ಹಾಗೂ ಭಕ್ತರೊಡಗೂಡಿ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಸೇವಾರ್ಥವಾಗಿ ಕ್ಷೀರ, ದಧಿ, ಘತ, ಮಧು ಶರ್ಕರಾಗಳಿಂದ ಪಂಚಾಮೃತಾಭಿಷೇಕವನ್ನು ಜರಗಿಸಲಾಯಿತು. ಫಲಾಭಿಷೇಕದ ಸಲುವಾಗಿ ನಾಳಿಕೇರ ಜಲಧಾರೆಯೊಂದಿಗೆ ವಿಶೇಷವಾಗಿ ಕಬ್ಬಿನ ರಸದಿಂದ ಅಭಿಷೇಕವನ್ನು ಮಾಡಿ ಶ್ರೀಗಂಧ ಸವರಿ, ಕಬ್ಬಿನ ಮಂಟಪದ ಅಲಂಕಾರವನ್ನು ನೀಡಿ ಧೂರ್ವಾಲಂಕಾರದೊಂದಿಗೆ ಧೂರ್ವಾಚನೆಗಳನ್ನು ಮಾಡಲಾಯಿತು. ಪಂಚಕಜ್ಜಾಯ, ನಾಳಿಕೇರ, ಕದಳಿಫಲ ನೈವೇದ್ಯಗಳನ್ನು ನೀಡಿ ಮಹಾಮಂಗಳಾರತಿ ನಡೆಸಲಾಯಿತು.
ಬ್ರಹ್ಮಶ್ರೀ ಪರಮೇಶ್ವರ ಕಾರಂತರ ದಿವ್ಯ ಹಸ್ತದಿಂದ ಗಣಪತಿ ಹವನ ನಡೆಯಿತು. ಸಾರ್ವಜನಿಕವಾಗಿ ಪರಿಶುದ್ಧ ಮನಸ್ಸು, ಭಕ್ತಿಯಿಂದ ಗಣಪತಿ ದೇವರನಾಮ ಸ್ಮರಣೆಯನ್ನು ಒಕ್ಕೊರಳಿನಿಂದ ಮಾಡಿ ವಿಘ್ನಗಳೆಲ್ಲಾ ದೂರವಾಗಿ ಇಷ್ಟಾರ್ಥ ಸಿದ್ಧಿಸುವಂತೆ ಗಣಪನಲ್ಲಿ ಪ್ರಾರ್ಥಿಸಲಾಯಿತು. ತೀರ್ಥಪ್ರಸಾದಗಳನ್ನು ಸ್ವೀಕರಿಸಿ ಭಗವದ್ಭಕ್ತಾಭಿಮಾನಿಗಳೆಲ್ಲರೂ ಪುನೀತರಾದರು. ಗಣಪತಿ ಬಪ್ಪ, ಗಣಪತಿ ಬಪ್ಪ, ಗಣಪತಿ ಬಪ್ಪ ಎಂಬ ನುಡಿಗಳಿಂದ ಜೈಕಾರ ಮೊಳಗಿತು. ತಂದೆ ಮಗನ ಪ್ರೀತಿ, ವಾತ್ಸಲ್ಯ, ಬಂಧುತ್ವವನ್ನು ನೆನೆಪಿಸಿಕೊಳ್ಳಲು ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ವಿಶೇಷ ಸೇವಾರ್ಥವಾಗಿ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಜರಗಿತು. ರಜತ, ಸ್ವರ್ಣ ಪುಷ್ಪಾಲಂಕಾರದೊಂದಿಗೆ ಮಹಾ ಪೂಜೆಯನ್ನು ಜರಗಿಸಿ ತೀರ್ಥ ಪ್ರಸಾದವನ್ನು ನೀಡಲಾಯಿತು. ಸಾರ್ವತ್ರಿಕವಾಗಿ ಕಬ್ಬಿನ (ಇಡೀ ಕಬ್ಬನ್ನು) ನೀಡಲಾಯಿತು. ದೈವಗಳಿಗೆ ಗಣಪತಿ ಪರ್ವದ ತಂಬಿಲ ಸೇವೆಯನ್ನು ನೆರವೇರಿಸಲಾಯಿತು.