ಕುಂಬಳೆ: ಗಡಿನಾಡಿನ ಕನ್ನಡ ಭಾಷೆಯ ಅಸ್ಮಿತೆಗೆ ಉಂಟಾಗುವ ತೊಂದರೆಗಳು ಇಲ್ಲಿಯ ಕನ್ನಡಾಂತರ್ಗತ ತುಳು ಸಹಿತ ಇತರ ಭಾಷೆಗಳ ಮೇಲೂ ಗಾಢ ಪರಿಣಾಮ ಬೀರುತ್ತದೆ. ಸಂಸ್ಕøತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಅಧಿಕೃತರು ಹಿಸುಕು ಯತ್ನ ಮಾಡಿದಲ್ಲಿ ಒಗ್ಗಟ್ಟಿನಿಂದ ಎದುರಿಸಿ ನ್ಯಾಯಯುತ ಹಕ್ಕುಗಳನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಸಮರೋಪಾದಿಯ ಕಾರ್ಯಚಟುವಟಿಕೆಗಳು ಆಗಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಅವರು ತಿಳಿಸಿದರು.
ಬದಿಯಡ್ಕ ರಸ್ತೆಯ ಅನ್ನಪೂರ್ಣ ಹಾಲ್‍ನಲ್ಲಿ ರಾಜಕೀಯೇತರವಾಗಿ ಕನ್ನಡಿಗರನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಶುಕ್ರವಾರ ಸಂಜೆ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕುಂಬಳೆ ಗ್ರಾಮ ಪಂಚಾಯತಿ ಮಟ್ಟದ ಕನ್ನಡಿಗರ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣಗೈದು ಮಾತನಾಡಿದ ಎಂ.ವಿ.ಮಹಾಲಿಂಗೇಶ್ವರ ಭಟ್ ಅವರು, ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಲಭಿಸಬೇಕಾದ ಸೌಲಭ್ಯಗಳನ್ನು ಮಲಯಾಳಿ ಅಧಿಕಾರಿಗಳು ವಿವಿಧ ನೆಪಗಳನ್ನು ಹೇಳಿ ನಿರಾಕರಿಸುವ ನೀತಿಯನ್ನು ಕೊನೆಗೊಳಿಸಿ ನ್ಯಾಯ ದೊರಕಿಸಿಕೊಡಲು ಕನ್ನಡ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ. ಈ ದೃಷ್ಟಿಯಿಂದ ರಾಜಕೀಯೇತರವಾಗಿ ಕನ್ನಡಿಗರನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಹಲವು ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಲ್ಲೆಲ್ಲ ಹೋರಾಟ ಸಮಿತಿಯ ವಿವಿಧ ಕಾರ್ಯಯೋಜನೆಗಳ ಮೂಲಕ ಉದ್ದೇಶಿತ ನ್ಯಾಯ ದೊರಕಿಸುವಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದ ಅವರು, ವಿವಿಧ ಮಾತೃಭಾಷಿಕರಾಗಿದ್ದರೂ ಕನ್ನಡವೆಂಬ ಏಕ ಛತ್ರದಡಿಯಲ್ಲಿ ಒಗ್ಗಟ್ಟಾಗಿ ಹಕ್ಕುಗಳಿಗಾಗಿ ಧ್ವನಿ ಎತ್ತರಿಸಿದಲ್ಲಿ ಸವಾಲುಗಳನ್ನು ಸುಲಲಿತವಾಗಿ ನಿಭಾಯಿಸಲು ಸಾಧ್ಯವಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಹಿರಿಯ ನಿವೃತ್ತ ಶಿಕ್ಷಕ, ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಮಾಸ್ತರ್ ಕುಂಬಳೆ, ಜನಪ್ರತಿನಿಧಿ ಸತ್ಯಶಂಕರ ಭಟ್ ಹಿಳ್ಳೆಮನೆ ಉಪಸ್ಥಿತರಿದ್ದು ಮಾತನಾಡಿದರು. ಕನ್ನಡ ಹೋರಾಟ ಸಮಿತಿಯ ಅಂಗನವಾಡಿ ಶಿಕ್ಷಕಿಯರ ಕನ್ನಡ ಪ್ರತಿನಿಧಿಗಳಾದ ರೂಪಾ ಟೀಚರ್, ಜಲಜಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಮಾಹಿತಿ ನೀಡಿ ಸ್ವಾಗತಿಸಿದರು. ಶ್ರೀನಿವಾಸ ಕಣ್ಣರಾಯ ಅನಂತಪುರ ವಂದಿಸಿದರು.
ಈ ಸಂದರ್ಭ ಕನ್ನಡ ಹೋರಾಟ ಸಮಿತಿ ಕುಂಬಳೆ ಪಂಚಾಯತಿ ಸಮಿತಿಗೆ ರೂಪು ನೀಡಲಾಯಿತು.ಗೌರವಾಧ್ಯಕ್ಷರಾಗಿ ಬ್ರಹ್ಮಶ್ರೀ ಚಕ್ರಪಾಣಿ ದೇವ ಪೂಜಿತ್ತಾಯ, ಅಧ್ಯಕ್ಷರಾಗಿ ಲಕ್ಷ್ಮಣ ಪ್ರಭು ಕುಂಬಳೆ, ಉಪಾಧ್ಯಕ್ಷರಾಗಿ ರಮೇಶ್ ಭಟ್ ಕುಂಬಳೆ ಹಾಗೂ ಸಿದ್ದೀಕ್ ಅಲಿ ಮೊಗ್ರಾಲ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಕಣ್ಣರಾಯ ಅನಂತಪುರ, ಜೊತೆ ಕಾರ್ಯದರ್ಶಿಗಳಾಗಿ ಸೌಮ್ಯಾಪ್ರಸಾದ್ ಕಿಳಿಂಗಾರು, ಉಮೇಶ್, ಕೋಶಾಧಿಕಾರಿಯಾಗಿ ಶೇಂತಾರು ನಾರಾಯಣ ಭಟ್ ಅವರನ್ನು ಅವಿರೋಧವಾಗಿ ಆರಿಸಲಾಯಿತು. ಅಸ್ವತ್ವಕ್ಕೆ ಬಂದ ಹೋರಾಟ ಸಮಿತಿಯ ನೂತನ ಕುಂಬಳೆ ಘಟಕದ ಪರವಾಗಿ ಕುಂಬಳೆ ಐಎಚ್‍ಆರ್‍ಡಿ ಕಾಲೇಜಿನಲ್ಲಿ ಕನ್ನಡಿಗರಿಗೆ ಶೇ.25 ಮೀಸಲಾತಿಗೆ ಆಗ್ರಹಿಸುವ ಮನವಿ ನೀಡಲು ಈ ಸಂದರ್ಭ ತೀರ್ಮಾನಿಸಲಾಯಿತು.