ಬದಿಯಡ್ಕ: ಗಾಂಧಿ ತತ್ವಗಳನ್ನು ಪ್ರತಿಪಾದಿಸಿ ಬದಿಯಡ್ಕದ ಗಾಂಧಿ ಎಂದೇ ಹೆಸರುವಾಸಿಯಾಗಿದ್ದು ವಿದ್ಯಾಭ್ಯಾಸ, ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಸ್ವಾತಂತ್ರ್ಯ ಸೇನಾನಿ ಡಾ. ಪಿ.ಎಸ್. ಶಾಸ್ತ್ರಿ ಆಗಿದ್ದಾರೆ. ಅವರ ಸಮಾಜಮುಖೀ ಚಿಂತನೆಯಿಂದ 1944ರಲ್ಲಿ ಸ್ಥಾಪಿತಗೊಂಡ ಈ ವಿದ್ಯಾಲಯವು ಇಂದು ಅನೇಕರ ಬಾಳಿನ ಬೆಳಕಾಗಿದೆ ಎಂದು ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ವೆಂಕಟ್ರಮಣ ಭಟ್ ಪೆರ್ಮುಖ ನುಡಿದರು.
ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸಂಸ್ಥಾಪಕ ಡಾ. ಪಿ.ಎಸ್. ಶಾಸ್ತ್ರಿಯವರ 113ನೇ ಜನ್ಮದಿನದ ಪ್ರಯುಕ್ತ `ಸೆ.27 ಸ್ಥಾಪಕರ ದಿನಾಚರಣೆ'ಯಲ್ಲಿ ಅವರ ಪ್ರತಿಮೆಗೆ ಹಾರಾರ್ಪಣೆಗೈದು ಅವರು ಮಾತನಾಡಿದರು.
ಶಾಲಾ ವ್ಯವಸ್ಥಾಪಕ ಡಾ. ಸೂರ್ಯ ಎನ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯರಾದ ಉದನೇಶ ಇಕ್ಕೇರಿ, ಕೃಷ್ಣ ಪ್ರಸಾದ ರೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಂ.ಜೆ.ಪ್ರಸಾದ್ ಕೋಳಾರಿ, ಮುಹಮ್ಮದ್ ಅಶ್ರಫ್, ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲ ಮಾಧವನ್ ಭಟ್ಟಾತ್ತಿರಿ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ತಂಗಮಣಿ ವಂದಿಸಿದರು. ಅಧ್ಯಾಪಕ ನಾರಾಯಣ ಆಸ್ರ ಕಾರ್ಯಕ್ರಮ ನಿರೂಪಿಸಿದರು.