ಮುಂಬೈ: ಭಾರತದ ಸಮುದ್ರ ಗಡಿಯಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುಂಬೈನಲ್ಲಿ ಐಎನ್ ಎಸ್ ವಿಕ್ರಮಾಧಿತ್ಯ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜನಾಥ್ ಸಿಂಗ್ ಅವರು, ಗುಪ್ತಚರ ಮೂಲಗಳ ಅನ್ವಯ ಸಮುದ್ರ ಮಾರ್ಗದಲ್ಲಿ ಉಗ್ರ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಮಗೆ ಲಭಿಸಿರುವ ಮಾಹಿತಿ ಪ್ರಕಾರ ನೆರೆಯ ರಾಷ್ಟ್ರದ ಸೇನೆ, ಗುಪ್ತಚರ ಇಲಾಖೆ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದರು.
ಎಲ್ಲರಿಗೂ ತಿಳಿದಂತೆ ಪಾಕಿಸ್ತಾನ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಉಗ್ರರನ್ನು ಪೋಷಣೆ ಮಾಡಿ ಅವರನ್ನು ಭಾರತದ ವಿರುದ್ಧ ದಾಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಸಮುದ್ರ ಮಾರ್ಗದಲ್ಲಿ ಈ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಭಾರತೀಯ ನೌಕಾಪಡೆ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.