ನವದೆಹಲಿ: ಮುಂಬೈ ನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವ ವಿಚಾರವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗಾಗಿ ವಿಶೇಷ ಪೀಠ ರಚನೆ ಮಾಡಿದ್ದು, ಅ.07 ಕ್ಕೆ ತುರ್ತು ವಿಚಾರಣೆ ನಿಗದಿಯಾಗಿದೆ.
ಮರಗಳ ಮಾರಣ ಹೋಮ ನಡೆಯುತ್ತಿರುವುದನ್ನು ವಿರೋಧಿಸಿ ರಿಶವ್ ರಂಜನ್ ಎಂಬುವವರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿಯನ್ನಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಒಪ್ಪಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಈ ಬಗ್ಗೆ ನೊಟೀಸ್ ಪ್ರಕಟಿಸಲಾಗಿದ್ದು, ಬೆಳಿಗ್ಗೆ 10:00 ಗಂಟೆಗೆ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.
ಕೆಲವು ಹಸಿರು ಕಾರ್ಯಕರ್ತರು ಈ ಪ್ರದೇಶದಲ್ಲಿ 2656 ಮರಗಳನ್ನು ಕಡಿಯುವ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್ ಕ್ರಮವನ್ನು ತಡೆಯಲು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಮುಂಬೈ ನಗರಾಡಳಿತವು ಮರ ಕಡಿಯಲು ಅನುಮತಿ ನೀಡಿತ್ತು. ಮರಗಳನ್ನು ಕಡಿಯುವುದಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶನಿವಾರ ನಿರಾಕರಿಸಿತ್ತು.