ತಿರುವನಂತಪುರ: ಲಕ್ಷದ್ವೀಪ ಮತ್ತು ಅರೇಬಿಯನ್ ಸಮುದ್ರದ ಬಳಿ ವಾಯುಭಾರ ಕುಸಿತದ ಪರಿಣಾಮ ಕೇರಳಕ್ಕೆ ಮಾಹ ಚಂಡಮಾರುತ ಅಪ್ಪಳಿಸಿದ್ದು, ದೇವರ ನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ.
ಮಾಹ ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದ 10 ಜಿಲ್ಲೆಗಳಲ್ಲಿ ಆರೆಂಜ್(ಕಿತ್ತಳೆ ಬಣ್ಣ) ಎಚ್ಚರಿಕೆ ನೀಡಲಾಗಿದೆ. 6 ರಿಂದ 20 ಸೆಂ.ಮೀ.ವರೆಗಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದ್ದು, ಎರ್ನಾಕುಲಂ, ತ್ರಿಶೂರ್, ಮಳಪ್ಪುರಂ ಮತ್ತು ಕೋಜಿಕೋಡ್ ಜಿಲ್ಲೆಗಳಲ್ಲಿ ಆರೆಂಜ್ ಎಚ್ಚರಿಕೆ ಪ್ರಕಟಿಸಲಾಗಿದೆ. ಇಂದು ಇತರ 10 ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆಯ ಸ್ಥಳೀಯ ಕಚೇರಿ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹ ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದಲ್ಲಿ ನವೆಂಬರ್ 2ರ ವರೆಗೆ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.