ವಾಷಿಂಗ್ಟನ್: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ತಕ್ಷಣವೇ 125 ಮಿಲಿಯನ್ ಜನ ಸಾವನ್ನಪ್ಪಲಿದ್ದಾರೆ ಮತ್ತು ಇಡೀ ಜಗತ್ತಿಗೇ ಈ ಯುದ್ಧದ ಬಿಸಿ ಮುಟ್ಟಲಿದೆ. ಜಾಗತಿಕ ಹವಾಮಾನ ದುರಂತಕ್ಕೂ ಇದು ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಪರಮಾಣು ಯುದ್ಧ ಕೇವಲ ಎರಡು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿ ಆ ದೇಶಗಳಲ್ಲಿ ಮಾತ್ರ ಹಾನಿ ಸಂಭವಿಸುವುದಿಲ್ಲ. ಅದು ಇಡೀ ಜಗತ್ತಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯದ ಸಹ-ಲೇಖಕ ಅಲನ್ ರೋಬಾಕ್ ಅವರು ಹೇಳಿದ್ದಾರೆ.ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾದ ಯುದ್ಧದ ಸನ್ನಿವೇಶವನ್ನು ವಿವರಿಸಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ - ಪಾಕಿಸ್ತಾನ ನಡುವೆ ಹಲವು ಬಾರಿ ಯುದ್ಧಗಳಾಗಿವೆ. ಆದರೆ ಪರಮಾಣು ಯುದ್ಧವಾಗಿಲ್ಲ. ಈಗ ಉಭಯ ದೇಶಗಳ ನಡುವೆ ಮತ್ತೊಂದು ಯುದ್ಧ ನಡೆಯುವ ಸಾಧ್ಯತೆಗಳು ಕಾಣಿಸುತ್ತಿದ್ದು, ಎರಡೂ ರಾಷ್ಟ್ರಗಳು 2025ರ ವೇಳೆಗೆ 400 ರಿಂದ 500 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲಿವೆ ಎಂದು ಅಧ್ಯಯನ ತಿಳಿಸಿದೆ.
ಜಗತ್ತಿನಲ್ಲಿ ಒಟ್ಟು 9 ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ ಭಾರತ -ಪಾಕಿಸ್ತಾನ ಮಾತ್ರ ಅತೀ ವೇಗವಾಗಿ ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದು ರೋಬಾಕ್ ಅವರು ಹೇಳಿದ್ದಾರೆ. ಎರಡು ಪರಮಾಣು ರಾಷ್ಟ್ರಗಳ ನಡುವೆ ದಿನದಿಂದ ದಿನಕ್ಕೆ ವಿಶೇಷವಾಗಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅಶಾಂತಿ ಹೆಚ್ಚುತ್ತಿದ್ದು, ಇದು ಮುಂದೊಂದು ದಿನ ಪರಮಾಣು ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಭಾರತ - ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ಸುಮಾರು 50 ರಿಂದ 125 ಮಿಲಿಯನ್ ಜನ ತಕ್ಷಣವೇ ಸಾವನ್ನಪ್ಪಲ್ಲಿದ್ದಾರೆ ಮತ್ತು ನಂತರ ಪರಮಾಣು ಬಾಂಬ್ ನ ಪರಿಣಾಮದಿಂದ ಜಗತ್ತಿನಾದ್ಯಂತ ಹಲವು ಸಾವು ನೋವುಗಳು ಸಂಭವಿಸಲಿವೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಕಾಶ್ಮೀವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದು. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆದರೂ ಪಾಕ್ ಪಾಠ ಕಲಿತಿಲ್ಲ.