ಕುಂಬಳೆ: ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶ ಮಂಜೇಶ್ವರ ಮಂಡಲ ಉಪಚುನಾವಣೆ ಅ.21ರಂದು ನಡೆಯಲಿದ್ದು, ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜಕೀಯ ಪಕ್ಷಗಳು ಕನ್ನಡಿಗರನ್ನೇ ಅಭ್ಯರ್ಥಿಗಳನ್ನಾಗಿಸಿದ್ದು ಪ್ರಸ್ತುತ ಕನ್ನಡಿಗರ ಹೋರಾಟದ ಫಲವಾಗಿದೆ. ಕನ್ನಡಿಗರ ಮತಗಳೇ ನಿರ್ಣಾಯಕವಾಗಿರುವ ಮಂಜೇಶ್ವರ ಉಪಚುನಾವಣೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರೋಪಾಯಗಳ ಕುರಿತು ಅಭ್ಯರ್ಥಿಗಳ ಮನ ಇಂಗಿತವನ್ನು ಅರಿಯುವ ಸಲುವಾಗಿ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಎಂಬ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಹೋರಾಟ ಸಮಿತಿ ತೀರ್ಮಾನಿಸಿದೆ. ಅ.12ರಂದು ಬೆಳಿಗ್ಗೆ 10.30ರಿಂದ 11.30ರ ತನಕ ಕುಂಬಳೆ ಸಿಂಡಿಕೇಟ್ ಬ್ಯಾಂಕ್‍ನ ಮಹಡಿಯ ಮಾಧವ ಪೈ ಸಭಾಂಗಣದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಅವರವರ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿ ಸಭೆಯು ತೀರ್ಮಾನಿಸಿದೆ. ಈ ಬಗ್ಗೆ ನಡೆದ ಹೋರಾಟ ಸಮಿತಿ ಸಭೆಯಲ್ಲಿ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಮಹಾಲಿಂಗೇಶ್ವರ ಭಟ್, ಬಾಲಕೃಷ್ಣ ಅಗ್ಗಿತ್ತಾಯ, ತಾರಾನಾಥ ಮಧೂರು, ಟಿ.ಶಂಕರನಾರಾಯಣ ಭಟ್, ಕೆ.ವಾಸುದೇವ, ಭಾಸ್ಕರ ಕಾಸರಗೋಡು, ಸತ್ಯನಾರಾಯಣ, ಶಾಂತಾ ಕುಮಾರಿ ಮುಂತಾದವರು ಮಾತನಾಡಿದರು.