HEALTH TIPS

ಸರ್ಕಾರದಿಂದ ತೆರಿಗೆ ಹೆಸರಲ್ಲಿ ಭಾರೀ ಸುಲಿಗೆ!-ತೆರಿಗೆ ಅವಧಿ ಮುಗಿಯದ ವಾಹನಗಳಿಗೂ ಹತ್ತು ವರ್ಷದ ತೆರಿಗೆ ಹಾಗೂ ಶೇ.15 ಬಡ್ಡಿ ಪಾವತಿಸುವಂತೆ ನೋಟೀಸ್, ಟ್ಯಾಕ್ಸಿ ಕಾರ್ಮಿಕರ ಅಳಲು ಕೇಳುವವರ್ಯಾರು??

   
      ಕಾಸರಗೋಡು: ಕೇಂದ್ರ ಸರ್ಕಾರವು ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮದ ಭಾಗವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ವಾಣಿಜ್ಯ ಉದ್ದೇಶದ ವಾಹನಗಳು ದೇಶಾದ್ಯಂತ ತಡೆ ರಹಿತವಾಗಿ ಮುಕ್ತವಾಗಿ ಸಂಚರಿಸಲು ಅನುವಾಗುವಂತೆ ಏಕರಾಷ್ಟ ಏಕತೆರಿಗೆ ನೀತಿ ಜಾರಿಗೆ ತರುವಂತೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಚಿಸಿರುವ ಸಚಿವರ ತಂಡ (ಜಿಒಎಂ) ಪ್ರಸ್ತಾವನೆ ಸಲ್ಲಿಸಿದೆ.ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ವಾಹನಗಳು ಪ್ರತಿ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆಯಿಂದ ಪಾರಾಗಲಿದೆ.
     ಕೇರಳ ಸರ್ಕಾರ ಆರ್ಥಿಕ ಸಂದಿಗ್ಧತೆಯ ನೆಪವೊಡ್ಡಿ ತೆರಿಗೆ ಅವಧಿ ಮುಗಿಯದ ಹಳೆ ವಾಹನಗಳಿಗೂ ಮುಂದಿನ ಹತ್ತು ವರ್ಷಗಳ ತೆರಿಗೆ ಹಾಗೂ ಅದರೊಂದಿಗೆ ಶೇ.15ರಷ್ಟು ಬಡ್ಡಿಯನ್ನು ಒಮ್ಮೆಲೆ ಪಾವತಿಸುವಂತೆ ನೋಟೀಸ್ ಜಾರಿಗೊಳಿಸಿದ್ದು ಟ್ಯಾಕ್ಸಿ ವೃತ್ತಿಯನ್ನು ಸ್ವ ಉದ್ಯೋಗವಾಗಿಸಿ ಜೀವನ ಮಾರ್ಗವನ್ನಾಗಿ ಸ್ವೀಕರಿಸಿದ ಬಡ ಕಾರ್ಮಿಕ ಜನರನ್ನು ಸುಲಿಯ ಹೊರಟಿದೆ.
      2019 ಸೆ.30ರಂದು ತೆರಿಗೆ ಅವಧಿ ಮುಗಿಯುವ ಹಂತದಲ್ಲಿದ್ದ ಟ್ಯಾಕ್ಸಿ ವಾಹನವೊಂದಕ್ಕೆ ಮುಂದಿನ 10ವರ್ಷಗಳ ತೆರಿಗೆ 61,652 ಹಾಗೂ ಬಡ್ಡಿ ರೂಪದಲ್ಲಿ 18,378 ಒಟ್ಟು 80,030 ಪಾವತಿಸುವಂತೆ ನೋಟೀಸ್ ಜಾರಿಗೊಳಿಸಿದೆ. ಇದೇ ವಾಹನದ ವಿಮೆ ನವೀಕರಣವೂ  ಇದೇ ಅವಧಿಯಲ್ಲಿ ಮುಗಿಯಲಿದ್ದು 23,700 ವಿಮೆಯೂ ಸೇರಿ 1,03,000 ಏಕ ಕಾಲದಲ್ಲಿ ಪಾವತಿಸುವ ದಯನೀಯ ಅವಸ್ಥೆಗೆ ಒಳಗಾಗಿದ್ದಾರೆ.2014-15 ಅವಧಿಯಲ್ಲಿ ನೊಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೂ ನೋಟೀಸ್ ಜಾರಿ ಗೊಳಿಸಲಾಗಿದ್ದು ಕೆಲವು ವಾಹನಗಳ ರೆವೆನ್ಯೂ ರಿಕವರಿ, ಮುಟ್ಟುಗೋಲು ಹಾಕುವಂತೆ ಗ್ರಾಮ ಕಚೇರಿಗಳಿಗೆ ಆದೇಶ ಹೊರಡಿಸಿದ್ದು ಬ್ಯಾಂಕ್ ಸಾಲವನ್ನು ಮರು ಪಾವತಿಸಲು ಸಂಕಷ್ಟ ಪಡುತ್ತಿದ್ದ ಟ್ಯಾಕ್ಸಿ ಕಾರ್ಮಿಕರಿಗೆ ಸರಕಾರದ ಈ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
        ಕರ್ನಾಟಕದಲ್ಲೂ ಕಿರಿ ಕಿರಿ:
    ಕೇರಳ ಗಡಿ ಭಾಗದ ಬಹುತೇಕ ಜನರು ವಿದ್ಯಾಭ್ಯಾಸ, ಚಿಕಿತ್ಸೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಆರಾಧನಾಲಯ ಸಂದರ್ಶನ, ಪ್ರವಾಸಗಳಿಗೆ ಕರ್ನಾಟಕವನ್ನೇ ಅವಲಂಬಿಸಬೇಕಾಗಿದೆ. ಕರ್ನಾಟಕ ರಾಜ್ಯ ಪ್ರವೇಶಿಸುವ ಇತರ ರಾಜ್ಯಗಳ ವಾಹನಗಳು ಒಂದು ಬಾರಿ ಕರ್ನಾಟಕ ಪ್ರವೇಶಿಸುವುದಿದ್ದರೂ ವಾರ್ಷಿಕ ತೆರಿಗೆ ವಿಧಿಸುವ ಕ್ರಮವನ್ನು 2013ರ ದಶಂಬರ ತಿಂಗಳಲ್ಲಿ ಕೈಗೊಂಡಿದ್ದು ಕಾರು ಇನ್ನಿತರ ಕಿರು ಟ್ಯಾಕ್ಸಿ ವಾಹನಗಳು ಒಂದು ಬಾರಿ ಕರ್ನಾಟಕ ತೆರಳ ಬೇಕಾಗಿದ್ದರೂ ವಾರ್ಷಿಕ ತೆರಿಗೆ ಸುಮಾರು 14,000 ಪಾವತಿಸಬೇಕಾಗಿದೆ.  ಕರ್ನಾಟಕ ರಸ್ತೆ ಪರವಾನಗಿ ಹೊಂದಿದ ವಾಹನಗಳಾಗಿದ್ದರೆ ಪರವಾನಗಿ ಅವಧಿಯ(5 ವರ್ಷ) ವರೆಗೆ ಕರ್ನಾಟಕ ಪ್ರವೇಶಿಸದಿದ್ದರೂ ತ್ರೈಮಾಸಿಕ 3,330 ಪಾವತಿಸ ಬೇಕಾಗಿದೆ.ಕರ್ನಾಟಕ ಸಾರಿಗೆ ಕಚೇರಿ, ತಪಾಸಣಾ ಕೇಂದ್ರಗಳಲ್ಲಿ ಈ ರೀತಿಯ ಪರವಾನಗಿ ಇರುವ ಕೇರಳ ಗಡಿ ಭಾಗದ ವಾಹನಗಳ ತೆರಿಗೆಯನ್ನು ನೇರವಾಗಿ ಪಾವತಿಸಲಾಗುತ್ತಿಲ್ಲ.ಏಜೆಂಟ್ ಸೇವಾ ಶುಲ್ಕ 220 ಸೇರಿ ಒಟ್ಟು 3,550, ಮಧ್ಯಮ ಗಾತ್ರದ ವಾಹನಗಳು 20 ಸಾವಿರಕ್ಕೂ ಅಧಿಕ ತೆರಿಗೆ, ಬಸ್ ಗಳಿಗೆ ಆಸನ ವ್ಯವಸ್ಥೆ ಹೊಂದಿಕೊಂಡು 60,000ದಿಂದ ಲಕ್ಸುರಿ ಬಸ್ ಆಗಿದ್ದರೆ 4,40,000 ವನ್ನೂ ಮೀರಿದ ತೆರಿಗೆ ಹಾಗೂ ಮಧ್ಯವರ್ತಿಗಳಿಗೆ ಸೇವಾ ಶುಲ್ಕ ನೀಡಬೇಕಾಗುತ್ತಿದೆ.
      ಕೇರಳದ ಗಡಿ ಭಾಗದ ಚಾಲಕರು ಮಾತ್ರವಲ್ಲದೇ ತಮಿಳ್ನಾಡು ಹಾಗೂ ಸ್ವಯಂ ಕರ್ನಾಟಕ ರಾಜ್ಯಗಳ ಚಾಲಕ ಮಾಲಕರೇ ಕರ್ನಾಟಕ ಸಾರಿಗೆ ಇಲಾಖೆಯ ಈ ಕ್ರಮವನ್ನು ವಿರೋಧಿಸಿತ್ತು.ಕೇರಳ ಚಾಲಕ ಮಾಲಕ ಸಂಘ ಈ ಬಗ್ಗೆ ಅನುಕೂಲಕರ ನಿಲುವು ತಾಳುವಂತೆ ಭಿನ್ನವಿಸಿದ್ದರೂ, ಕೇರಳದ ಸಾರಿಗೆ ಮಂತ್ರಿ, ಸಾರಿಗೆ ಕಮಿಷನರ್ ಕರ್ನಾಟಕ ಸಾರಿಗೆ ಮಂತ್ರಿಯಾಗಿದ್ದ ರಾಮಲಿಂಗ ರೆಡ್ಡಿ ಅವರಲ್ಲಿ ವಿನಂತಿಸಿ, ಸೌತ್ ಝೋನ್ ಟ್ರಾನ್ಸ್ಪೋರ್ಟ್ ಕಮಿಷನ್ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾವಿಸಲಾಗಿದ್ದರೂ ಕರ್ನಾಟಕ ಸಾರಿಗೆ ಇಲಾಖೆ ತನ್ನ ನಿಲುವಿನಿಂದ ಹಿಂಜರಿದಿರಲಿಲ್ಲ.ಇತರ ರಾಜ್ಯಗಳೂ ಇದೇ ಕ್ರಮ ಕೈಗೊಳ್ಳುವಂತೆ ಪುಕ್ಕಟೆ ಸಲಹೆ ನೀಡಿ ಕೈ ತೊಳೆದುಕೊಂಡಿತ್ತು.
      ವರ್ಷಗಳ ಬಳಿಕ ಕೇರಳ ಸರ್ಕಾರವೂ ಇತರ ರಾಜ್ಯ ವಾಹನಗಳ ಆಸನ ವ್ಯವಸ್ಥೆಗೆ ಹೊಂದಿಕೊಂಡು ತೆರಿಗೆ ಮೊತ್ತ ಏರಿಸಿದ್ದರೂ ಇತರ ರಾಜ್ಯಗಳ ವಾಹನಗಳಿಗೆ ಸಾಪ್ತಾಹಿಕ ತೆರಿಗೆ ಪಾವತಿಸುವ ಅವಕಾಶ ನೀಡಿದೆ. ಇದೇ ವೇಳೆ ಇತರ ರಾಜ್ಯಗಳ ಸಾರಿಗೆ ವಾಹನಗಳು ವರ್ಷದಲ್ಲಿ ಒಂದು ಬಾರಿ ಕರ್ನಾಟಕ ಪ್ರವೇಶಿದರೂ ವರ್ಷದ ತೆರಿಗೆ ಪಾವತಿಸುವ ಕಟು ನಿಲುವನ್ನು ಕರ್ನಾಟಕ ಸಾರಿಗೆ ಆಯುಕ್ತರು ಕೈಗೊಂಡಿದ್ದರು.ಗಡಿಭಾಗದ ಕರ್ನಾಟಕ ತಪಾಸಣಾ ಕೇಂದ್ರದ ಕೆಲವೊಂದು  ಅಧಿಕಾರಿಗಳು ಕರ್ನಾಟಕ ಪ್ರವೇಶಿಸುವ ವಾಹನಗಳು ತೆರಿಗೆ ಪಾವತಿಗಾಗಿ ತಪಾಸಣಾ ಕೇಂದ್ರ ತಲಪಿದಾಗ ಬೆಂಗಳೂರಲ್ಲಿ ತೆರಿಗೆ ಪಾವತಿಸಿ ಕರ್ನಾಟಕದಲ್ಲಿ ಪ್ರಯಾಣ ಮುಂದುವರಿಸಿ ಎಂದು ಹೇಳಿರುವುದಾಗಿಯೂ ಟ್ಯಾಕ್ಸಿ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಇತರ ರಾಜ್ಯಗಳ ಸಾರಿಗೆ ವಾಹನಗಳಿಗೆ ಭಾರೀ ಮೊತ್ತವನ್ನು ತೆರಿಗೆ ರೂಪದಲ್ಲಿ ವಿಧಿಸುತ್ತಿರುವ ರಾಜ್ಯ ಕರ್ನಾಟಕವಾಗಿದೆ.
       ಗಡಿ ಪ್ರದೇಶದಲ್ಲಿ ನಕಲಿ ಟ್ಯಾಕ್ಸೀ ಹಾವಳಿ; ಟ್ಯಾಕ್ಸಿ ವಾಹನಗಳ ಸಂಖ್ಯೆ ಕ್ಷೀಣ:
      ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಕ್ಸೀ ಮಾಲಕರೇ ಸ್ವಯಂ ಚಾಲಕರಾಗಿ ದುಡಿಯುತ್ತಿದ್ದಾರೆ.ರಾಜ್ಯ, ಅಂತಾರಾಜ್ಯ ತೆರಿಗೆ, ವಿಮೆ ಮೊತ್ತಗಳಲ್ಲಿನ ಹೆಚ್ಚಳದಿಂದ ಟ್ಯಾಕ್ಸೀ ಉದ್ಯಮವು ಅವನತಿಯತ್ತ ಸಾಗುತ್ತಿರುವಂತೆಯೇ ನಕಲೀ ಟ್ಯಾಕ್ಸೀ ಹಾವಳಿಯಿಂದ ಟ್ಯಾಕ್ಸೀ ಉದ್ಯಮ ನಡೆಸುವವರಿಗೆ ಬಾಡಿಗೆಯೇ ಇಲ್ಲದ ಸ್ಥಿತಿ ಬಂದೊದಗಿದೆ.ಬ್ಯಾಂಕ್, ಖಾಸಗಿ ಫೈನಾನ್ಸ್ ಗಳಿಂದ ಸಾಲ ಪಡೆದು ಟ್ಯಾಕ್ಸಿ ಉದ್ಯಮವನ್ನೇ ಸ್ವಯಂ ಉದ್ಯೋಗವಾಗಿಸಿ ಜೀವನ ಸಾಗಿಸುತ್ತಿದ್ದ ಬಹುತೇಕರ ಸಾಲದ ಮರುಪಾವತಿ ಕಂತು ಮೊಟಕು ಗೊಂಡಿದೆ. ನಾಲ್ಕೈದು ವರ್ಷಗಳ ಹಿಂದೆ 30ಕ್ಕೂ ಹೆಚ್ಚು ಜೀಪುಗಳು ಬಾಡಿಗೆ ನಡೆಸುತ್ತಿದ್ದ ಪೆರ್ಲದಲ್ಲಿ ಇದೀಗ ಜೀಪುಗಳ ಸಂಖ್ಯೆ 10ಕ್ಕೂ ಕೆಳಗಿಳಿದಿದೆ.ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಟವೇರಾ, ಟಾಟಾ ಸುಮೋ, ತೂಫಾನ್, ವಿಂಗರ್,  ಟ್ರಾವೆಲರ್ ವಾಹನಗಳಲ್ಲಿ ಒಂದೆರಡಷ್ಟೇ ಇದೀಗಲೂ ಸೇವೆ ಒದಗಿಸುತ್ತಿದೆ.ಪೆರ್ಲದಲ್ಲಿ ಬಾಡಿಗೆಗಾಗಿ ನಿಲ್ಲಿಸಲಾಗಿದ್ದ ಮೂರು ಮಿನಿ ಬಸ್ ಗಳೂ ಕಾಣೆಯಾಗಿ ನಾಲ್ಕೈದು ವರ್ಷಗಳಾಗಿವೆ.
     ಪೆರ್ಲ, ಬೆದ್ರಂಪಳ್ಳ, ಮಣಿಯಂಪಾರೆ, ಕಜಂಪಾಡಿ, ಏತಡ್ಕ, ಸ್ವರ್ಗ, ಅಡ್ಕಸ್ಥಳ, ಖಂಡೇರಿ, ವಾಣೀನಗರ, ಕಿನ್ನಿಂಗಾರು, ನೆಟ್ಟಣಿಗೆ, ನಾಟೆಕಲ್ಲು, ಕಾಯರುಪದವು, ಬಾಯಾರು, ಮುಳಿಗದ್ದೆ, ಬೆರಿಪದವು, ಕುಂಜತ್ತೂರು, ಕಣ್ವತೀರ್ಥ ಮತ್ತಿತರ ಭಾಗದ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರುತಿ ಓಮ್ನಿ, ಅಲ್ಟೋ-800, ಜೀಪು, ಟಾಟಾ ಸುಮೋ, ಟವೇರಾ, ಕ್ವಾಲೀಸ್ ಮೊದಲಾದ ಖಾಸಗಿ ವಾಹನಗಳನ್ನು ಬಾಡಿಗೆ ಉದ್ದೇಶಕ್ಕಾಗಿ ಬಳಸುತ್ತಿದೆ.ಟ್ಯಾಕ್ಸೀ ವಾಹನವೊಂದಕ್ಕೆ ಸಮಾನಾಂತರವಾಗಿ ಮೂವತ್ತರಷ್ಟು ನಕಲೀ ವಾಹನಗಳು ಈ ಎಲ್ಲಾ ಪ್ರದೇಶಗಳಲ್ಲಿ ಬಾಡಿಗೆ ನಡೆಸುತ್ತಿವೆ.ಟಾಟಾ ಮ್ಯಾಜಿಕ್ ಐರಿಸ್ ಸರಣಿ ವಾಹನಗಳಿಗೆ ಉಭಯ ರಾಜ್ಯ ಪರವಾನಗಿ ಲಭಿಸಿರುವುದೂ ಟ್ಯಾಕ್ಸೀ ವಾಹನಗಳಿಗೆ ಬಾಡಿಗೆ ಕಡಿಮೆಯಾಗಲು ಪ್ರಮುಖ  ಕಾರಣವಾಗಿದೆ.ಹಿಂದೆ ಟ್ಯಾಕ್ಸಿ ವಾಹನವೊಂದಿ ತಿಂಗಳಲ್ಲಿ ಸಾಮಾನ್ಯ ಎಲ್ಲಾ ದಿನಗಳಲ್ಲೂ ಓಡಾಟ ನಡೆಸಿ 60 ಸಾವಿರದಿಂದ 1ಲಕ್ಷದ ವರೆಗೆ ಒಟ್ಟು ಆದಾಯ ಗಳಿಸುತ್ತಿದ್ದರೆ ಇದೀಗ ತಿಂಗಳಲ್ಲಿ ನಾಲ್ಕು ದಿನ ಓಡಾಟ, 10ರಿಂದ 15ಸಾವಿರ ಒಟ್ಟು ಗಳಿಕೆ ಪಡೆಯುವಲ್ಲಿ ಸೀಮಿತವಾಗಿದೆ.
     ಇಂಧನ, ಚಕ್ರ, ಬಿಡಿಭಾಗಗಳ ಬೆಲೆ, ವಿಮೆ, ತೆರಿಗೆ ಮೊತ್ತಗಳು ದುಪ್ಪಾಟ್ಟಾಗುತ್ತಿದ್ದರೂ ಬಾಡಿಗೆ ದರವನ್ನು ಏರಿಸುವ ಕ್ರಮ ಉಂಟಾಗದಿರುವುದು, ನಕಲಿ ಟ್ಯಾಕ್ಸೀ ಹಾವಳಿ, ಟ್ಯಾಕ್ಸೀ ಚಾಲಕರ ಇತರ ಸಮಸ್ಯೆಗಳ ಬಗ್ಗೆ ಟ್ಯಾಕ್ಸೀ ಚಾಲಕ, ಮಾಲಕರ ಸಂಘಟನೆ ಸಭೆಗಳಲ್ಲಿ ಹೇಳಲಾಗುತ್ತಿದ್ದರೂ ಸಮಸ್ಯೆಗಳ ಪರಿಹಾರದ ಕ್ರಮ ಉಂಟಾಗುತ್ತಿಲ್ಲ. ಸ್ವ ಉದ್ಯೋಗಕ್ಕೆ ಉತ್ತೇಜನ ನೀಡ ಬೇಕಾಗಿರುವ ಸರಕಾರವೇ ತೆರಿಗೆ ಏರಿಸಿ, ಅದಕ್ಕೂ ಬಡ್ಡಿ ಹೇರಿ ಬಡ ಜನರ ಜೀವನದೊಂದಿಗೆ ಚೆಲ್ಲಾಟ ನಡೆಸುತ್ತಿರುವುದು, ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಬೇಕಾದ ಸಂಘಟನೆಗಳು ತೆರಿಗೆ ವಿಷಯದಲ್ಲಿ ಮೌನ ವಹಿಸಿರುವುದು ವಿಪರ್ಯಾಸವೇ ಸರಿ.
     ಅಭಿಮತ:
    'ವಾಹನಗಳು 15ವರ್ಷಗಳ ಆಜೀವನ ತೆರಿಗೆ ಪಾವತಿಸಬೇಕಾಗಿದೆ.5 ವರ್ಷಗಳ ತೆರಿಗೆ ಪಾವತಿಸಿದ ವಾಹನಗಳಿಗೆ ಆಜೀವನಾಂತ ತೆರಿಗೆ ಪಾವತಿಸುವಂತೆ ನೋಟೀಸ್ ನೀಡಲಾಗಿತ್ತು.ಇನ್ನೂ ತೆರಿಗೆ ಪಾವತಿಸದ ವಾಹನಗಳನ್ನು ಮುಟ್ಟುಗೋಲು ಹಾಕುವಂತೆ ಸರಕಾರದ ನಿರ್ದೇಶಿಸಿದೆ'
      - ಮನೋಜ್ ಸ್ರಾಂಬಕ್ಕಲ್
ಸಾರಿಗೆ ಅಧಿಕಾರಿ, ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆ
....................................................................................................................
      'ಸಮಾನಾಂತರ ಕಳ್ಳ ಟ್ಯಾಕ್ಸಿ, ಕೇರಳದಲ್ಲಿ ಸೆಸ್ಸ್, ತೆರಿಗೆ, ವಿಮೆ, ತೈಲ, ಟೈರ್, ಬಿಡಿ ಭಾಗಗಳ ಬೆಲೆ ಏರಿಕೆಯಿಂದ ಸ್ವ ಉದ್ಯೋಗ, ಜೀವನ ನಿರ್ವಹಣೆಗೆ ಬ್ಯಾಂಕ್ ಇತರ ಮೂಲಗಳಿಂದ ಸಾಲ ಮಾಡಿ ಟ್ಯಾಕ್ಸಿ ವಾಹನ ಖರೀದಿಸಿ ಬಾಡಿಗೆ ನಡೆಸುವ ಬಹಳಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿರುವಾಗ, ಕಾರ್ಮಿಕ ಪರ ಪಕ್ಷ, ಎಲ್ಲವನ್ನೂ ಸರಿಮಾಡುತ್ತೇವೆ ಎಂದು ಅಧಿಕಾರಕ್ಕೇರಿದ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಕೇರಳ ಸರಕಾರ ಆರ್ಥಿಕ ಮುಗ್ಗಟ್ಟಿನ ನೆಪ ಒಡ್ಡಿ ತೆರಿಗೆ ಅವಧಿ ಮುಗಿಯದ ವಾಹನಗಳಿಗೆ ಮುಂದಿನ ಹತ್ತು ವರ್ಷಗಳ ಅವಧಿಗೆ ತೆರಿಗೆ ಹಾಗೂ ಭಾರೀ ಮೊತ್ತದ ಬಡ್ಡಿ ಯನ್ನೂ ವಿಧಿಸಿರುವುದು ನಿಜಕ್ಕೂ ಶಾಕ್ ನೀಡಿದೆ.ನನ್ನ ಶಿಫ್ಟ್ ಟ್ಯಾಕ್ಸಿ ವಾಹನಕ್ಕೆ ಸಾರಿಗೆ ಇಲಾಖೆ ಯಾವುದೇ ನೋಟೀಸ್ ನೀಡಿಲ್ಲ.ಬದಲಾಗಿ ಗ್ರಾಮ ಕಚೇರಿ ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಬಂದಿದ್ದು ಅವರ ಶುಲ್ಕವೂ ಸೇರಿ ಭಾರೀ ಮೊತ್ತ ಪಾವತಿಸಬೇಕಾಗಿ ಬಂತು'
        - ಪ್ರಸನ್ನ ಕುಮಾರ್
         ಟ್ಯಾಕ್ಸಿ ಚಾಲಕ, ಮಾಲಕರು, ಪೆರ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries