ನವದೆಹಲಿ: ದಶಕಗಳಿಂದ ವಿವಾದಾತ್ಮಕವಾಗಿ ಬೆಳೆದುಬಂದಿರುವ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದವನ್ನು ಅಕ್ಟೋಬರ್ 17 ರೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ವಿಚಾರಣೆಯ 37 ನೇ ದಿನದ ಮುಕ್ತಾಯದಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠ ಸುದೀರ್ಘ ವಾದಗಳ ಅಂತಿಮ ಹಂತದ ವೇಳಾಪಟ್ಟಿಯನ್ನು ನಿಗದಿಪಡಿಸಿತು.
ಅಕ್ಟೋಬರ್ 14 ರಂದು ಮುಸ್ಲಿಮರ ಪರ ಅರ್ಜಿದಾರರು ವಾದವನ್ನು ಮುಕ್ತಾಯಗೊಳಿಸಲಿದ್ದ್ರೆ.ಅದಾದ ನಂತರ ಹಿಂದೂ ಪಕ್ಷಗಳಿಗೆ ಅಕ್ಟೋಬರ್ 16 ರೊಳಗೆ ತಮ್ಮ ಪುನರ್ವಿಮರ್ಶೆಯನ್ನು ಸಂಕ್ಷಿಪ್ತವಾಗಿ ಹೇಳಬೇಕಿದೆ. ಅದಕ್ಕಾಗಿ ಅವರುಗಳಿಗೆ ಎರಡು ದಿನಗಳ ಕಾಲಾವಕಾಶವಿದೆ. ಅದಾಗಿ ಅಕ್ಟೋಬರ್ 17 ವಿಚಾರಣೆಯ ಕಡೆಯ ದಿನವಾಗಿರಲಿದೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, ಈ ಮೊದಲು ವಿಚಾರಣೆಯನ್ನು ಮುಕ್ತಾಯಗೊಳಿಸಲು ಅಕ್ಟೋಬರ್ 18ರ ಗಡುವನ್ನು ನಿಗದಿ ಮಾಡಿತ್ತು.
ಸಿಜೆಐ ನವೆಂಬರ್ 18ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ತೀರ್ಪನ್ನು ನವೆಂಬರ್ 17ರೊಳಗೆ ಘೋಷಿಸಲಾಗುತ್ತದೆ.