ಕಾಸರಗೋಡು: ರಾಜ್ಯ ಹೈಕೋರ್ಟ್‍ನ ಆದೇಶ ಪ್ರಕಾರ ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್‍ಆರ್‍ಟಿಸಿ)ದಲ್ಲಿ ದುಡಿಯುತ್ತಿದ್ದ 2230 ತಾತ್ಕಾಲಿಕ ಚಾಲಕರನ್ನು ಸೇವೆಯಿಂದ ವಜಾಗೈಯ್ಯಲಾಗಿದ್ದು, ಅದು ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸೇವೆಗಳನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸ ತೊಡಗಿದೆ.
ರಾಜ್ಯದಲ್ಲಿ ಒಟ್ಟು 5312 ಕೆಎಸ್‍ಆರ್‍ಟಿಸಿ ಸೇವೆಗಳಿದ್ದು, ಅದರಲ್ಲಿ 580 ಸೇವೆಗಳನ್ನು ರದ್ದುಗೊಳಿಸಬೇಕಾಗಿ ಬಂದಿತ್ತು. ಕೆಲವು ಜಿಲ್ಲೆಗಳಲ್ಲಿ ರಜೆಯಲ್ಲಿರುವ ಚಾಲಕರು ಮತ್ತು ಇತರ ಚಾಲಕರಿಗೆ ಡಬಲ್ ಡ್ಯೂಟಿ ನೀಡಿ ಗುರುವಾರ ಬಸ್ ಸೇವೆಯನ್ನು ಬಹುತೇಕ ನಿಯಂತ್ರಿಸಲಾಗಿತ್ತು. ಆದರೆ ಡಬಲ್ ಡ್ಯೂಟಿ ಮಾಡಿದ ಚಾಲಕರು ಶುಕ್ರವಾರವೂ ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ ಅದು ಇನ್ನಷ್ಟು ಹೆಚ್ಚು ಬಸ್ಸು ಸೇವೆ ಮೊಟಕುಗೊಳಿಸುವಂತೆ ಮಾಡಿದೆ. ಇದರಿಂದಾಗಿ ಈಗಾಗಲೇ ಶೇಕಡ 25ರಷ್ಟು ಬಸ್ ಸೇವೆ ಮೊಟಕುಗೊಂಡಿದೆ.
ಕೆಎಸ್‍ಆರ್‍ಟಿಸಿಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಚಾಲಕರು ಮತ್ತು ನಿರ್ವಾಹಕರನ್ನು ವಜಾಗೈಯ್ಯುವಂತೆ ಹೈಕೋರ್ಟ್ ಈ ಹಿಂದೆಯೇ ಆದೇಶ ನೀಡಿತ್ತು. ಅದರಂತೆ ತಾತ್ಕಾಲಿಕ ಸಿಬ್ಬಂದಿಗಳನ್ನು ವಜಾಗೈಯ್ಯಲಾಗಿದ್ದರೂ ವಜಾಗೈಯ್ಯಲಾಗಿದ್ದ ಚಾಲಕರನ್ನು ದಿನ ವೇತನ ಆಧಾರದಲ್ಲಿ ಬಳಿಕ ನೇಮಿಸಲಾಗಿತ್ತು. ಈ ಕ್ರಮದ ವಿರುದ್ಧ ಪಿಎಸ್‍ಸಿ ರ್ಯಾಂಕ್ ಹೋಲ್ಡರ್ ಅಸೋಸಿಯೇಶನ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಎಲ್ಲಾ ತಾತ್ಕಾಲಿಕ ಸಿಬ್ಬಂದಿಗಳನ್ನು ಪೂರ್ಣವಾಗಿ ಹೊರತು ಪಡಿಸುವಂತೆ ಕಠಿಣ ಆದೇಶ ನೀಡಿತ್ತು. ಅದರಂತೆ 2230 ತಾತ್ಕಾಲಿಕ ಚಾಲಕರನ್ನು ಕೆಎಸ್‍ಆರ್‍ಟಿಸಿ ಸೇವೆಯಿಂದ ವಜಾಗೈದಿದೆ.
ಕೆಎಸ್‍ಆರ್‍ಟಿಸಿಯಲ್ಲಿ ಒಂದೇ ಬಾರಿ ಇಷ್ಟೊಂದು ಸಂಖ್ಯೆಯಲ್ಲಿ ಚಾಲಕರನ್ನು ಸೇವೆಯಿಂದ ಹೊರತುಪಡಿಸಿರುವುದು ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾತ್ರವಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಪ್ರಯಾಣಿಕರು ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ.
ಕಾಸರಗೋಡು ಕೆಎಸ್‍ಆರ್‍ಟಿಸಿ ಡಿಪೆÇೀದಲ್ಲಿ ಈಗಾಗಲೇ 47 ಚಾಲಕರ ಹುದ್ದೆಗಳು ತೆರವು ಬಿದ್ದಿದೆ. ಆದರೆ ಅದಕ್ಕೆ ಈ ತನಕ ಖಾಯಂ ಚಾಲಕರನ್ನು ನೇಮಕಾತಿ ನಡೆದಿಲ್ಲ. ತಾತ್ಕಾಲಿಕ ಚಾಲಕರ ಸೇವೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಡಿಪೆÇ್ಪೀದಿಂದ ಚಂದ್ರಗಿರಿ ರೂಟಿನಲ್ಲಿ -2, ಪಾಣತ್ತೂರು ರೂಟ್‍ನಲ್ಲಿ -2 ಮತ್ತು ಚಿತ್ತಾರಿಕಲ್ ರೂಟ್‍ನಲ್ಲಿ -1 ಕೆಎಸ್‍ಆರ್‍ಟಿಸಿ ಸೇವೆ ಮೊಟಕುಗೊಳಿಸಬೇಕಾಗಿ ಬಂದಿದೆ. ಹೊಸದುರ್ಗ ಸಬ್ ಡಿಪೆÇೀದಿಂದಲೂ ಎರಡು ಬಸ್ ಸೇವೆ ಮೊಟಕುಗೊಳಿಸಲಾಗಿದೆ. ಇತರ ಜಿಲ್ಲೆಗಳ ಹಾಗೆ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಸೇವೆಗಳ ಮೇಲೆ ಈ ಸಮಸ್ಯೆ ಹೆಚ್ಚಿನ ಪರಿಣಾಮ ಬೀರಿಲ್ಲ.
ಮೊದಲೇ ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಕೆಎಸ್‍ಆರ್‍ಟಿಸಿ ಈಗ ಚಾಲಕರಿಲ್ಲದೆ ಬಸ್ಸು ಸೇವೆ ಮೊಟಕುಗೊಳಿಸಬೇಕಾಗಿ ಬಂದಿರುವುದು ಕೆಎಸ್‍ಆರ್‍ಟಿಸಿಯನ್ನು ಇನ್ನಷ್ಟು ಆರ್ಥಿಕ ನಷ್ಟದತ್ತ ತಳ್ಳುವಂತೆ ಮಾಡಿದೆ.