ಬದಿಯಡ್ಕ: ಪುತ್ತೂರು ಬಣ್ಣದ ಮಾಲಿಂಗ ಯಕ್ಷ ಪ್ರತಿಷ್ಠಾನ ಇದರ ವತಿಯಿಂದ ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರಧಾನ ಮತ್ತು ಯಕ್ಷಗಾನ ಬಯಲಾಟ ಅ.6 ರಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಇದರ ಅಂಗವಾಗಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಯಕ್ಷ ಪ್ರತಿಷ್ಠಾನದ ಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಉಪನ್ಯಾಸಕ, ಕವಿ ಕೆ.ಮಹಾಲಿಂಗ ಮಂಗಳೂರು ಮಾತನಾಡಿ ಕಾಸರಗೋಡಿನಲ್ಲಿ ಬಣ್ಣದ ಮಾಲಿಂಗ ಅವರ ಹೆಸರಿನಲ್ಲಿ ಆಯೋಜಿಸುವ ಪ್ರಥಮ ಯಕ್ಷಗಾನ ಕಾರ್ಯಕ್ರಮ ಇದಾಗಿದೆ. ಮಹಾನ್ ಸಾಧಕರಾದ ಹಿರಿಯ ತಲೆಮಾರಿನ ಪರಂಪರೆಯನ್ನು ಸದಾ ನೆನಪಿಸುವ, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಶಿಕ್ಷಿತ ಆರೋಗ್ಯಪೂರ್ಣ ಸಮಾಜದ ಲಕ್ಷ್ಯವಾಗಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಶುಭಾಶಂಸನೆಗೈದರು. ಕೆ.ತಿಮ್ಮಪ್ಪ, ರವಿಶಂಕರ, ಮನೀಶ್ ಎಡನೀರು, ಕೆ.ಗಂಗಾಧರ, ಸಮಿತಿ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಅ.6 ರಂದು ಅಪರಾಹ್ನ 2 ರಿಂದ ಶೂರ್ಪನಖಾ- ಖರಾಸುರ ಕಥಾಭಾಗದ ಯಕ್ಷಗಾನ ಬಯಲಾಟದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಜೆ 5 ಕ್ಕೆ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಹಿರಿಯ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಉದ್ಘಾಟಿಸುವರು. ತೆಂಕು ತಿಟ್ಟು ಯಕ್ಷಗಾನ ಸಹಿತ ರಕ್ಷಣಾವೇದಿಕೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಸಂಸ್ಮರಣೆ ನಡೆಸುವರು. ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿರುವರು. ಇದೇ ಸಂದರ್ಭ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಹಿರಿಯ ಬಣ್ಣದ ವೇಷಧಾರಿ ಮರ್ಕಂಜ ಬೊಮ್ಮಾರು ಐತಪ್ಪ ಗೌಡರಿಗೆ ಪ್ರಧಾನ ಮಾಡಲಾಗುವುದು. ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯರವರಿಗೆ ಬಣ್ಣದ ಮಹಾಲಿಂಗ ಸ್ಮೃತಿ ಪುರಸ್ಕಾರ ನೀಡಲಾಗುವುದು. ಅಲ್ಲದೆ ಸರವು ತೇರಪ್ಪ ಪಾಟಾಳಿಯವರನ್ನು ಸನ್ಮಾನಿಸಲಾಗುವುದು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡುವರು. ಪ್ರತಿಷ್ಠಾನದ ಗೌರವಾಧ್ಯಕ್ಷ ಸುಬ್ರಾಯ ಸಂಪಾಜೆ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ಮಂಗಳೂರು ಉಪಸ್ಥಿತರಿರುವರು. 6.30 ರಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಾರಥ್ಯದಲ್ಲಿ ಮಹಿರಾವಣ ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ.