ಮಂಜೇಶ್ವರ: ಮಂಜೇಶ್ವರ ವಿಧಾನಸಭೆ ಉಪಚುನಾವಣೆ ಸಂಬಂಧ ಅಭ್ಯರ್ಥಿಗಳ ನಾಮಪತ್ರ ಸೂಕ್ಷ್ಮ ತಪಾಸಣೆ ನಡೆಸಲಾಗಿದ್ದು, 8 ಮಂದಿಯ ನಾಮಪತ್ರಗಳನ್ನು ಸ್ವೀಕಾರ ಮಾಡಲಾಗಿದೆ.
ಎಂ.ಸಿ.ಖಮರುದ್ದೀನ್(ಮುಸ್ಲಿಂ ಲೀಗ್), ಕುಂಟಾರು ರವೀಶ ತಂತ್ರಿ(ಬಿ.ಜೆ.ಪಿ.), ಶಂಕರ ರೈ ಎಂ.(ಸಿ.ಪಿ.ಎಂ.), ಗೋವಿಂದನ್ ಬಿ.(ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ), ಅಬ್ದುಲ್ಲ ಕೆ.(ಸ್ವತಂತ್ರ), ಖಮರುದ್ದೀನ್ ಎಂ.ಸಿ.(ಸ್ವತಂತ್ರ), ಜಾನ್ ಡಿ'ಸೋಜಾ ಎ.(ಸ್ವತಂತ್ರ), ರಾಜೇಶ್ ಬಿ.(ಸ್ವತಂತ್ರ) ಅವರ ನಾಮಪತ್ರ ಸ್ವೀಕರಿಸಲಾಗಿದೆ.
ಮೂವರು ಬದಲಿ ಅಭ್ಯರ್ಥಿಗಳ 5 ನಾಮಪತ್ರ ತಿರಸ್ಕರಿಸಲಾಗಿದೆ. ಎಂ.ಅಬ್ಬಾಸ್(ಮುಸ್ಲಿಂಲೀಗ್), ಪಿ.ರಘುದೇವನ್(ಸಿ.ಪಿ.ಎಂ.), ಸತೀಶ್ಚಂದ್ರ ಭಂಡಾರಿ(ಬಿ.ಜೆ.ಪಿ.) ಅವರ ನಾಮಪತ್ರಗಳನ್ನು ಮುಖ್ಯ ಅಭ್ಯರ್ಥಿಗಳ ನಾಮಪತ್ರ ಸ್ವೀಕಾರದ ಹಿನ್ನೆಲೆಯಲ್ಲಿ ನಿರಾಕರಿಸಲಾಗಿದೆ. ಡಾ.ಕೆ.ಪದ್ಮರಾಜನ್, ಎ.ಕೆ.ಎಂ.ಅಶ್ರಫ್ ಅವರ ನಾಮಪತ್ರಗಳನ್ನು ಸೂಕ್ತ ದಾಖಲಾತಿ ಪತ್ರಗಳಿಲ್ಲದ ಆರೋಪದಲ್ಲಿ ತಳ್ಳಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚುನಾವಣೆ ಅಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ (ಎಲ್.ಆರ್.) ಎನ್.ಪ್ರೇಮಚಂದ್ರನ್ ಅವರು ಈ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸಾಮಾನ್ಯ ನಿರೀಕ್ಷಕ ಯಶವಂತ್ ವಿ. ಮತ್ತು ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್ ಸೂಕ್ಷ್ಮ ತಪಾಸಣೆಗೆ ನೇತೃತ್ವ ವಹಿಸಿದ್ದರು. ಎ.ಆರ್.ಒ. ಎನ್.ಸುರೇಂದ್ರನ್, ಇ.ಆರ್.ಒ. ವಿ.ಎಂ.ಸಜೀವನ್ ಭಾಗವಹಿಸಿದ್ದರು. ಅಭ್ಯರ್ಥಿಗಳು ಹಾಜರಾಗದೇ ಇದ್ದ ಪಕ್ಷಗಳಿಂದ ಪ್ರತಿನಿಧಿಗಳು ಸೂಕ್ಷ್ಮ ತಪಾಸಣೆ ವೇಳೆ ಹಾಜರಿದ್ದರು. ಅ.3 ಮಧ್ಯಾಹ್ನ 3 ಗಂಟೆ ವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂತೆಗೆಯುವ ಅವಕಾಶ ನೀಡಲಾಗಿದೆ.