ಮಂಜೇಶ್ವರ: ಮಂಜೇಶ್ವರ ಉಪ ಚುನಾವಣೆ ಘೋಷಣೆಯಾಗುತ್ತಲೇ ವಿವಿಧ ಪಕ್ಷಗಳು ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರದಲ್ಲಿ ಅಲ್ಪ ಸಂಖ್ಯಾತ ಕನ್ನಡಿರ ಮನಗೆಲ್ಲುವ ಚಟುವಟಿಕೆಗಳಲ್ಲಿ ವ್ಯಸ್ತವಾಗಿವೆ. ಐಕ್ಯರಂಗ, ಎನ್‍ಡಿಎ ಹಾಗೂ ಎಡರಂಗ ಮಂಜೇಶ್ವರದಲ್ಲಿ ಪ್ರಾದೇಶಿಕ ಕನ್ನಡಿಗರ ಮತ ಗಳಿಸಲು ತಮ್ಮ ಪ್ರಚಾರ ತಂತ್ರವನ್ನು ಚುರುಕುಗೊಳಿಸಿವೆ.
ಮಂಜೇಶ್ವರದಲ್ಲಿ ಬಿಜೆಪಿಗೆ ಅವಕಾಶ ಹೇರಳವಾಗಿದ್ದು, ಜನಪ್ರಿಯ ನೇತಾರ ಕುಂಟಾರು ರವೀಶ ತಂತ್ರಿಗಳನ್ನು ಕಣಕ್ಕಿಳಿಸಿದೆ. ಯುಡಿಎಫ್ ಸಂಘವು ಮುಸ್ಲಿಂ ಲೀಗ್‍ಗೆ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಖಮರುದ್ದೀನ್ ಅವರನ್ನು ಹಾಗೂ ಎಲ್‍ಡಿಎಫ್ ಸ್ಥಳೀಯ ನೇತಾರ ಶಂಕರ ರೈ ಮಾಸ್ತರ್ ಅವರನ್ನು ಕಣಕ್ಕಿಳಿಸಿದೆ. ಈಗಾಗಲೇ ಎಲ್ಲಪಕ್ಷಗಳ ಮಂಡಲ ಮಟ್ಟದ ಸಮಾವೇಶಗಳು ಮುಕ್ತಾಯಗೊಂಡಿದ್ದು, ಬಿರುಸಿನ ಸಾರ್ವಜನಿಕ ಸಂಪರ್ಕದಲ್ಲಿ ನಿರತವಾಗಿದೆ.
ಕನ್ನಡಿಗರೇ ಹೆಚ್ಚಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಉಂಟಾಗುವ ಸಮಸ್ಯೆಗಳತ್ತ ಗಮನಹರಿಸಲು ಆಡಳಿತ ನಡೆಸುವ ಸರ್ಕಾರ, ಪ್ರತಿಪಕ್ಷಗಳು ವಿಫಲವಾಗಿದೆ. ಮಂಜೇಶ್ವರ ವ್ಯಾಪ್ತಿಯಲ್ಲಿರುವ ಕನ್ನಡ ಶಾಲೆಗಳಲ್ಲಿ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವುದರ ವಿರುದ್ಧ ಕನ್ನಡಿಗರ ಹೋರಾಟ, ನೂತನವಾಗಿ ರಚಿಸಿದ ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿ ಘೋಷಿಸುವುದು, ಅಂಗನವಾಡಿಗಳಲ್ಲಿ ಮಕ್ಕಳಿಗಾಗಿ ಕನ್ನಡ ಪುಸ್ತಕ, ಕೈಪಿಡಿ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿ, ಮಾಹಿತಿ ಫಲಕಗಳು ಸಹಿತ ಆನೇಕ ಬೇಡಿಕೆ ಈಡೇರಿಸಲು ಪ್ರಯತ್ನ ನಡೆಯುತ್ತಿರುವಾಗಲೇ ಮಂಜೇಶ್ವರ ಉಪಚುನಾವಣೆ ಕನ್ನಡಿಗರ ಶಕ್ತಿ ಪ್ರದರ್ಶನವೂ ಆಗಿದೆ.
ಕೇರಳದಲ್ಲಿಯೇ ತೀರಾ ಹಿಂದುಳಿದ ಕ್ಷೇತ್ರವಾಗಿರುವ ಮಂಜೇಶ್ವರ ಎಲ್ಲರೀತಿಯಲ್ಲೂ ಅವಗಣಿಸಲ್ಪಟ್ಟ ಪ್ರದೇಶ. ಈ ಪ್ರದೇಶದ ಅಭಿವೃದ್ಧಿಯತ್ತ ಧ್ವನಿಯೆತ್ತಲು ಯಾರೂ ಮುಂದೆ ಬರುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಕನ್ನಡಿಗರ ಸಂವಿಧಾನದತ್ತ ಹಕ್ಕು ಸಂರಕ್ಷಣೆಯ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಎಲ್ಲ ಪಕ್ಷಗಳಿಗೂ ಭಾಷಾ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣು ಬಿದ್ದಿದೆ. ರಾಜ್ಯಾವಾರು ವಿಂಗಡಣೆ ಬಳಿಕ 1982ರ ತನಕ ಕ್ಷೇತ್ರದಿಂದ ಕನ್ನಡಿಗರೇ ಶಾಸಕರಾಗಿ ಆಯ್ಕೆಯಾಗಿದ್ದರು. 1987ರ ಬಳಿಕ ಮುಸ್ಲಿಂ ಲೀಗ್ ತೆಕ್ಕೆಗೆ ಒಲಿದ ಮಂಜೇಶ್ವರ ಕ್ಷೇತ್ರದಲ್ಲಿ ಬಳಿಕ ಕನ್ನಡಿಗ ಅಭ್ಯರ್ಥಿಯೊಬ್ಬರು ಆಯ್ಕೆಯಾಗಿಲ್ಲ.
ಮಂಜೇಶ್ವರಕ್ಕೆ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಂ. ಉಮೇಶ್ ರಾವ್ ಅವಿರೋಧವಾಗಿ ಆಯ್ಕೆಯಾದರು. 1957ರಿಂದ 1960ರ ತನಕ ಶಾಸಕರಾಗಿದ್ದರು. ಬಳಿಕ 1960 ಮತ್ತು 1967ರಲ್ಲಿಎರಡು ಬಾರಿ ಮಂಜೇಶ್ವರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಳ್ಳಿಗೆ ಮಹಾಬಲ ಭಂಡಾರಿ 1970ರ ತನಕ ಮಂಜೇಶ್ವರ ಶಾಸಕರಾಗಿದ್ದರು. 1970ರಲ್ಲಿ ಮೊದಲ ಬಾರಿಗೆ ಸಿಪಿಐಯಿಂದ ಎಂ. ರಾಮಪ್ಪ ಹಾಗೂ 1980 ಹಾಗೂ 1982ರಲ್ಲಿ ಎರಡು ಬಾರಿ ಸಿಪಿಐಯ ಡಾ. ಎ. ಸುಬ್ಬ ರಾವ್ ಶಾಸಕರಾಗಿದ್ದರು.
1987 ರಿಂದ ಈ ಕ್ಷೇತ್ರ ಮುಸ್ಲಿಂ ಲೀಗ್ ತೆಕ್ಕೆಗೆ ಲಭಿಸಿತು. 1987, 1991, 2011ರಲ್ಲಾಗಿ ನಾಲ್ಕು ಬಾರಿ ಮುಸ್ಲಿಂ ಲೀಗ್‍ನ ಅಭ್ಯರ್ಥಿಯಾಗಿದ್ದ ಚೆರ್ಕಳ ಅಬ್ದುಲ್ಲ ಶಾಸಕರಾಗಿದ್ದರಲ್ಲದೆ ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಚ್ಚರಿ ಎಂಬಂತೆ 2006ರ ಚುನಾವಣೆಯಲ್ಲಿ ಸಿಪಿಎಂನ ಸಿ.ಎಚ್. ಕುಂಞÂ್ಞಂಬು ಶಾಸಕರಾಗಿ ಆಯ್ಕೆಯಾಗಿದ್ದರು. 2011, 2016ರಲ್ಲಿಮುಸ್ಲಿಂ ಲೀಗ್‍ನ ಪಿ.ಬಿ. ಅಬ್ದುಲ್ ರಝಾಕ್ ಶಾಸಕರಾಗಿದ್ದರು. 2018 ರಲ್ಲಿ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಝಾಕ್ ನಿಧನರಾದರು. ಇದೀಗ ಒಂದು ವರ್ಷದ ಬಳಿಕ ಚುನಾವಣೆ ನಡೆಯುತ್ತಿದೆ.