ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಪ್ರಾರಂಭದ ನಂತರ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರ ಸಾಹಿಬ್ ಗುರುದ್ವಾರಕ್ಕೆ ತೆರಳಲಿರುವ ಮೊದಲ ಸರ್ವ ಪಕ್ಷ ನಿಯೋಗದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಮನಮೋಹನ್ ಸಿಂಗ್ ಭೇಟಿ ಬಳಿಕ ಮಾತನಾಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಐತಿಹಾಸಿಕ ಕರ್ತಾರ್ ಪುರ ಕಾರಿಡಾರ್ ಪ್ರಾರಂಭ ಸೇರಿದಂತೆ ಗುರುನಾನಕ್ ದೇವ್ ಅವರ 550ನೇ ಪ್ರಕಾಶ್ ಪುರ್ಬ್ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು. ನವೆಂಬರ್ 12 ರಂದು ಸುಲ್ತಾನ್ ಪುರ್ ಲೊದಿಯಲ್ಲಿ ನಡೆಯಲಿರುವ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳನ್ನು ಒತ್ತಾಯಿಸಲಾಗಿದೆ .ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಂಜಾಬ್ ಸರ್ಕಾರ ನೀಡಿರುವ ಆಹ್ವಾನವನ್ನು ರಾಷ್ಟ್ರಪತಿ ಹಾಗೂ ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಕರ್ತರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕೆ ತಾವಾಗಲೀ,ಮನ್ ಮೋಹನ್ ಸಿಂಗ್ ಆಗಲೀ ಹೋಗುವುದಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದರು.
ನವೆಂಬರ್ 9 ರಂದು ನಡೆಯಲಿರುವ ಈ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನಮೋಹನ್ ಸಿಂಗ್ ಅವರಿಗೆ ಪಾಕಿಸ್ತಾನ ಸರ್ಕಾರ ಆಹ್ವಾನ ನೀಡಿತ್ತು. ಆದರೆ, ಆ ಆಹ್ವಾನವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂಬುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.