ಮಂಜೇಶ್ವರ: ಮೂಡಂಬೈಲು ಸರ್ಕಾರಿ ಶಾಲೆಯ ಹೈಸ್ಕೂಲ್ ವಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠ ಮಾಡಲು ನೇಮಕಗೊಂಡ ಕನ್ನಡದ ಯಾವ ಅರಿವೂ ಇಲ್ಲದ ಮಲಯಾಳಿ ಅಧ್ಯಾಪಕನನ್ನು ಹಿಂದಕ್ಕೆ ಕಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು, ಹೆತ್ತವರು, ರಕ್ಷಕ ಶಿಕ್ಷಕ ಸಂಘ ಹಾಗು ಸ್ಥಳೀಯರ ನಡೆಸುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರಿದಿದೆ.
ಮೀಂಜ ಪಂಚಾಯತಿಯ ಅಚ್ಚಗನ್ನಡ ಪ್ರದೇಶವಾದ ಮೂಡಂಬೈಲು ಸರ್ಕಾರಿ ಶಾಲೆಯ ಹೈಸ್ಕೂಲ್ ವಿಭಾಗ ಎಚ್.ಎಸ್.ಟಿ. ಕನ್ನಡ ಹುದ್ದೆಗೆ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕನನ್ನು ನೇಮಿಸಲಾಗಿತ್ತು. ಅ.31 ರೊಳಗೆ ಶಾಲೆಗೆ ಹಾಜರಾಗಲು ನೇಮಕ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಬುಧವಾರ ಶಾಲೆಗೆ ಹಾಜರಾಗಲು ಅಧ್ಯಾಪಕ ಬಂದಿದ್ದರು. ಆದರೆ ವಿದ್ಯಾರ್ಥಿಗಳು ಶಾಲಾ ಗೇಟ್ ಮುಚ್ಚಿ ಅಧ್ಯಾಪಕ ಶಾಲೆಯ ಕಂಪೌಂಡಿನೊಳಗೆ ಪ್ರವೇಶಿಸದಂತೆ ತಡೆದಿದ್ದರು. ವಿದ್ಯಾರ್ಥಿಗಳಿಗೆ ಪೆÇೀಷಕರು, ರಕ್ಷಕ ಶಿಕ್ಷಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಸಮಾಜ ಸೇವಕರು ಮೊದಲಾದವರು ಬೆಂಬಲ ನೀಡಿದ್ದರು.
ಅಧ್ಯಾಪಕನನ್ನು ಯಾವುದೇ ಕಾರಣಕ್ಕೂ ಅಧಿಕಾರ ವಹಿಸಿಕೊಳ್ಳದಂತೆ ತಡೆಯುವುದಾಗಿ ಈ ಹಿಂದೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು.
ಗುರುವಾರ ಬೆಳಿಗ್ಗೆ 9.30 ರಿಂದ ಸಂಜೆ 4ರ ವರೆಗೆ ಪ್ರತಿಭಟನೆ ನಡೆಯಿತು. ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಗ್ರಾ.ಪಂ.ಅಧ್ಯಕ್ಷೆ ಶಂಶಾದ್ ಶುಕೂರ್, ಬ್ಲಾ.ಪಂ.ಉಪಾಧ್ಯಕ್ಷೆ ಮಮತಾ ದಿವಾಕರ್, ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ, ಮೊಹಮ್ಮದ್ ಕುಂಞÂ, ಸದಸ್ಯೆ ಚಂದ್ರಾವತಿ, ಶಾಲಾ ಮಾತೃಸಂಘದ ಅಧ್ಯಕ್ಷೆ ಅನುಪಮಾ, ಆಶಾ ಕಾರ್ಯಕರ್ತೆ ಜೌರಾ, ಮುಖಂಡರಾದ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಸತ್ಯನಾರಾಯಣ ಕಲ್ಲೂರಾಯ, ಶಿವರಾಮ ಪದಕಣ್ಣಾಯ, ಜಗದೀಶ ಮೂಡಂಬೈಲು, ಜನಾರ್ದನ, ಹರಿಜೀವನ್ ದಾಸ್, ರಹ್ಮಾನ್ ಮಾಸ್ತರ್ ದಡ್ಡಂಗಡಿ ಮೊದಲಾದವರು ನೇತೃತ್ವ ವಹಿಸಿ ಮಾತನಾಡಿದರು. ಜಯರಾಮ ಬಲ್ಲಂಗುಡೇಲು ಸ್ವಾಗತಿಸಿ, ನಿರ್ವಹಿಸಿದರು.