ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರದ ಮುಳ್ಳೇರ್ಯ ಹವ್ಯಕ ಮಂಡಲ ನೂತನ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರವು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬುಧವಾರ ಜರಗಿತು.
ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಾಗಾರದ ಉದ್ದೇಶ, ಸಂಘಟನೆಯ ಕಾರ್ಯ ಸ್ವರೂಪ, ಶ್ರೀ ಮಠದ ಸಮಗ್ರ ಇತಿಹಾಸ, ಶ್ರೀ ಮಠದ ನೇತೃತ್ವದಲ್ಲಿ ಈ ತನಕ ಜರಗಿರುವ ಐತಿಹಾಸಿಕ ಕಾರ್ಯಕ್ರಮಗಳು, ಶ್ರೀ ಮಠದ ವಿವಿಧ ಸಮಾಜಮುಖೀ ಯೋಜನೆಗಳು, ಶಾಸನತಂತ್ರದ ಕಾರ್ಯನಿರ್ವಹಣೆಯ ಸ್ವರೂಪ ಈ ವಿಷಯಗಳ ಕುರಿತು ಶಾಸನತಂತ್ರದ ಸೇವಾಖಂಡದ ಶ್ರೀಸಂಯೋಜಕ ಮಹೇಶ ಚಟ್ನಳ್ಳಿ ಸಮಗ್ರ ಮಾಹಿತಿಗಳನ್ನು ನೀಡಿದರು.
ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕರ್ತರ ಅರ್ಹತೆಯ ಅಷ್ಟಸೂತ್ರಗಳಾದ ಸಮಯದಾನ, ಸಾಮರ್ಥ್ಯ, ಚಾರಿತ್ರ್ಯ, ಸೇವಾಸೋದರತೆ, ಲಕ್ಷೈಕದೃಷ್ಟಿ, ಶಿಸ್ತು, ಭಾವಶುದ್ಧಿ, ಬದ್ಧತೆ ಈ ಕುರಿತಾದ ವಿಷಯಗಳ ಬಗ್ಗೆ ಮಹಾ ಮಂಡಲ ಕೋಶಾಧ್ಯಕ್ಷರಾದ ಜಿ. ಜಿ. ಹೆಗ್ಗಡೆ ವಿಷಯ ವಿಶ್ಲೇಷಣೆಯೊಂದಿಗೆ ವಿವರಿಸಿದರು. ಮಹಾ ಮಂಡಲ ವೈದಿಕ ಪ್ರಧಾನ ವೇ. ಮೂ. ನೀಲಕಂಠ ಯಾಜಿ ಸಂಘಟನೆಯ ಅನಿವಾರ್ಯತೆ, ವಿಷ್ಣುಗುಪ್ತ ವಿದ್ಯಾಪೀಠ ಈ ವಿಚಾರದಲ್ಲಿ ಮಾಹಿತಿಗಳನ್ನಿತ್ತರು.
ಬಳಿಕ ಮಹಾ ಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಇವರ ನಿರ್ದೇಶನದಲ್ಲಿ ವಿಭಾಗವಾರು ಪ್ರತ್ಯೇಕ ಸಭೆಯು ಜರಗಿದವು. ಸಮಾರೋಪ ಕಾರ್ಯಕ್ರಮದಲ್ಲಿ ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ ಮೊಗ್ರ ಮತ್ತು ಮಹಾ ಮಂಡಲಾಧ್ಯಕ್ಷ ಆರ್ ಯಸ್ ಹೆಗ್ಡೆ ಸಮಾರೋಪ ಮಾತುಗಳನ್ನಾಡಿದರು. ಸೇವಾಖಂಡದ ಸಂಯೋಜಕಿ ವಿದ್ಯಾಲಕ್ಷ್ಮಿ ಕೈಲಂಕಜೆ ನಿರೂಪಣೆ ಮಾಡಿದರು. ಮಾತೃತ್ವಮ್ ವಿಭಾಗದ ಈಶ್ವರಿ ಬೇರ್ಕಡವು, ಶಾಸನತಂತ್ರದ ಪದಾಧಿಕಾರಿಗಳು, ಮಹಾಮಂಡಲ ಮುಷ್ಠಿ ಭಿಕ್ಷಾ ಪ್ರಧಾನ ಶ್ರೀಕೃಷ್ಣ ಮಿನಗದ್ದೆ, ಮಹಾಮಂಡಲ ಬಿಂಧು-ಸಿಂಧು ಪ್ರಧಾನ ಅರವಿಂದ ಧರ್ಬೆ, ಮಹಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನೆ ಸಂಧ್ಯಾ ಕಾನತ್ತೂರು, ಧರ್ಮಕರ್ಮ ಖಂಡದ ಸಂಯೋಜಕ ಕೇಶವಪ್ರಸಾದ ಕೂಟೇಲು, ಕೆ.ಎನ್. ಭಟ್, ಮಂಡಲ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.