ಮುಳ್ಳೇರಿಯ: ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟವರು ರಾಷ್ಟ್ರಪಿತ ಗಾಂಧೀಜಿ. ಅವರೊಬ್ಬರು ಮಾರ್ಗದರ್ಶಕ ಹಾಗೂ ಯುಗಪುರುಷ ಎಂದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಮಹೇಶ ಏತಡ್ಕ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಬುಧವಾರ ಜರಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು ಬಾಲ್ಯದಲ್ಲಿ ಸಂಕೋಚ ಮನೋಭಾವದವರಾಗಿದ್ದ ಮೋಹನದಾಸ ಹೇಗೆ ನಾಯಕತ್ವವನ್ನು ಮೈಗೂಡಿಸಿಕೊಂಡು ಬೆಳೆದರು ಎಂಬುದನ್ನು ವಿವಿಧ ಕಾಲಘಟ್ಟಗಳಲ್ಲಿ ಸಂಭವಿಸಿದ ಘಟನೆಗಳನ್ನು ಉಲ್ಲೇಖಿಸಿ ವಿವರಿಸಿದರು. ಗಾಂಧಿüೀಜಿಯವರ ತತ್ವ, ಆದರ್ಶಗಳು ಇಂದಿಗೆ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತಿಳಿಸಿದರು.
ಡಾ.ವೇಣುಗೋಪಾಲ್ ಕಳೆಯತ್ತೋಡಿ ಮಾತನಾಡಿ ಮಹಾರಾಷ್ಟ್ರದ ಜಲ್ ಗಾಂವ್ ನ ಜೈನ್ ಡ್ರಿಪ್ ಇರಿಗೇಶನ್ ಕಾರ್ಖಾನೆಯಲ್ಲಿರುವ ಗಾಂಧೀಜಿ ಮ್ಯೂಸಿಯಂನ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಗಾಂಧಿ ಮತ್ತು ಗಾಂಧೀಜಿಯ ನಾಡಿನಲ್ಲಿ ಎಂಬ ಎರಡು ಸ್ವರಚಿತ ಕವನಗಳನ್ನು ವಾಚಿಸಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು.