ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಗೃಹ ಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರನ್ನು ಭಾನುವಾರ ಭೇಟಿಯಾಗಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಪಕ್ಷದ ನಿಯೋಗಕ್ಕೆ ಅನುಮತಿ ನೀಡಿದೆ.
ನ್ಯಾಷನಲ್ ಕಾನ್ಫರೆನ್ಸ್ ಹಂಗಾಮಿ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ನೇತೃತ್ವದ ನಿಯೋಗ ನಾಳೆ ವಿಮಾನದ ಮೂಲಕ ಜಮ್ಮು ತಲುಪಲಿದ್ದಾರೆ ಎಂದು ಪಕ್ಷದ ವಕ್ತಾರ ಮದನ್ ಮಾಂಟೂ ತಿಳಿಸಿದ್ದಾರೆ.ರಾಣಾ ಅವರು ತಮ್ಮ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು, ನಾಳೆ ಭೇಟಿಗೆ ಅವಕಾಶ ನೀಡಿದ್ದಾರೆ.
89 ವರ್ಷದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರದ ತಮ್ಮ ನಿವಾಸದಲ್ಲಿ ಗೃಹ ಬಂಧನ ದಲ್ಲಿದ್ದರೆ, ಅವರ ಮಗ ಒಮರ್ ಅಬ್ದುಲ್ಲಾ ರಾಜ್ಯ ಸರ್ಕಾರದ ಅತಿಥಿ ಗೃಹದಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.