ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಅಕ್ರಮ ಹಣ, ಮದ್ಯ ಇತ್ಯಾದಿ ಸಾಗಣೆ ನಿಯಂತ್ರಣ ಇತ್ಯಾದಿ ವಿಚಾರಗಳ ಕರ್ತವ್ಯದಲ್ಲಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಭಾನುವಾರ ಜರುಗಿತು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಕ್ಸ್ ಪೆಂಡೀಚರ್ ನಿರೀಕ್ಷಕ ಕಮಲ್ ಜೀತ್ ಕಮಲ್ ಅವರು ನೇತೃತ್ವ ವಹಿಸಿದ್ದರು. ಅಕ್ರಮ ಹಣ ಇತ್ಯಾದಿಗಳನ್ನು ವಶಪಡಿಸಿಕೊಳ್ಳುವ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರುಮಾಹಿತಿ ನೀಡಿದರು. ಶಾಂತಿಯುತ, ಸುಧಾರಿತ ಚುನಾವಣೆ ನಡೆಯುವಲ್ಲಿ ಸಿಬ್ಬಂದಿಯ ಬೆಂಬಲ ಅಗತ್ಯ ಎಂದವರು ಈ ವೇಳೆ ಅಭಿಪ್ರಾಯಪಟ್ಟರು.
ಆದಾಯ ತೆರಿಗೆ ತನಿಖಾಧಿಕಾರಿ ಸುಬ್ರಹ್ಮಣ್ಯಂ ಅವರು ತರಗತಿನಡೆಸಿದರು. ಗುಪ್ತ ಮಾಹಿತಿ ಲಭಿಸಿ ಆರೋಪಿಯ ವಿರುದ್ಧ ದಾಳಿ ಸಹಿತ ಕ್ರಮ ಕೈಗೊಳ್ಳುವ ವೇಳೆ ಕೈಗೊಳ್ಳಬೇಕಾದ ಮುಂಜಾಗರೂಕತೆ ಇತ್ಯಾದಿಗಳ ಬಗ್ಗೆ ತರಗತಿ ನಡೆಸಿದರು.
ಸಹಾಯಕ ಖರ್ಚು-ವೆಚ್ಚ ನಿರೀಕ್ಷಕ ಜನಾರ್ದನನ್ ಟಿ.ಇ., ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಸಹಾಯಕ ಅಬಕಾರಿ ಕಮೀಷನರ್ ವಿನೋದ್ ಬಿ.ನಾಯರ್ ಮೊದಲಾದವರು ಉಪಸ್ಥಿತರಿದ್ದರು.