ಮಂಜೇಶ್ವರ: ಪಾತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೀ ಪ್ರೈಮರಿ ತರಗತಿ ಮಕ್ಕಳಿಗೆ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ವತಿಯಿಂದ ನೀಡುವ ಪ್ರಭಾತ ಉಪಹಾರದ ವಿಸ್ತರಣಾ ಸಮಾರಂಭವನ್ನು ಮಕ್ಕಳಿಗೆ ಉಪಹಾರ ನೀಡಿ ಮಂಜೇಶ್ವರ ಕ್ಷೇತ್ರ ನಿರೂಪಣಾ ಅಧಿಕಾರಿ ಗುರು ಪ್ರಸಾದ್ ರೈ ಉದ್ಘಾಟಿಸಿದರು.
ಸಾಯಿ ನಿಕೇತನ ಸೇವಾಶ್ರಮದ ಕೊಡುಗೆ ಅಪಾರ ಹಾಗೂ ಅನನ್ಯ ಎಂದು ಅವರು ಶ್ಲಾಘಿಸಿದರು. ಎಲ್ಲಾ ವರ್ಗದ ಮಕ್ಕಳು ಒಟ್ಟಿಗೆ ಕುಳಿತು ಉಪಹಾರ ಸವಿಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದರು. ನಾವೆಲ್ಲರೂ ಭಾರತ ದೇಶದ ಪ್ರಜೆಗಳು. ಇಲ್ಲಿ ರಾಮ ಮಹಮ್ಮದ್ ಜೋಸೆಫ್ ಎಲ್ಲರೂ ಗೆಳೆಯರು. ಆದರೆ ಅನ್ ಐಡೆಡ್ ಶಾಲೆಗಳು ಕೆಲವು ಧರ್ಮಾಧಾರಿತವಾಗಿ ಇರುವುದರಿಂದ ಅಲ್ಲಿ ರಾಮನಿಗೆ ಜೋಸೆಫ್ ಆಗಲೀ ಮಹಮ್ಮದ್ ಆಗಲೀ ಗೆಳೆÀಯರು ಸಿಗುವುದಿಲ್ಲ. ಆದುದರಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ಒಂದಾಗಿ ಬಾಳಲು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯ ಆಡಳಿತ ಟ್ರಸ್ಟಿ ಡಾ.ಉದಯ ಕುಮಾರ್ ಮಾತನಾಡಿ ಇದೆಲ್ಲ ಭಗವಾನ್ ಸಾಯಿ ಬಾಬಾರವರ ಅನುಗ್ರಹ. ದೇವರ ಸೇವೆಯೆಂದು ಮಾಡುತ್ತೇವೆ ಎಂದರು. ಶುಭಾಶಂಸನೆ ಮಾಡಿದ ಕೃಷ್ಣ ಪ್ರಕಾಶ್ ರಕ್ಷಕರು ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಒಂದು ಹೊತ್ತಿನ ಉಪಹಾರದ ವ್ಯವಸ್ಥೆ ಯಲ್ಲಿ ಸಾಯಿ ನಿಕೇತನ ಸೇವಾಶ್ರಮದೊಂದಿಗೆ ಕೈಜೋಡಿಸಿ
ಸಹಕರಿಸಬೇಕೆಂದು ಸಲಹೆ ನೀಡಿದರು. ಮಾತೃಸಂಘದ ಅಧ್ಯಕ್ಷೆ ರೇವತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಬು ಗಟ್ಟಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಪದ್ಮನಾಭ ಮಾಸ್ತರ್ ಸ್ವಾಗತಿಸಿ, ಉಸ್ಮಾನ್ ಮಾಸ್ತರ್ ವಂದಿಸಿದರು. ಜಯಂತ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.