HEALTH TIPS

ದಸರಾ ಸಾಹಿತ್ಯ ಸಂಭ್ರಮ ಸಂಪನ್ನ-ಅಸ್ಮಿತೆಗೊದಗುವ ವ್ಯಾಕುಲಗಳು ಮತ್ತೆ ಸಂಭವಿಸಬಾರದು-ನಾರಾಯಣ ಗಟ್ಟಿ ಕುಂಬಳೆ-ಜಂಟಿಯಾಗಿ ಉದ್ಘಾಟಿಸಿ ಅಭಿಮತ


      ಕುಂಬಳೆ: ಹಿಂದಿನ ಯುಗಗಳಲ್ಲಿ ಪಾತಾಳ ಲೋಕದ ರಾಕ್ಷಸರು, ದೇಶದೊಳಗಿನ ರಾಕ್ಷಸರು, ಬಳಿಕ ಕುಟುಂಬದೊಳಗಿನ ರಾಕ್ಷಸೀ ಶಕ್ತಿಗಳೊಂದಿಗೆ ಯುದ್ದ ನಡೆಯುತ್ತಿದ್ದು ಪುರಾಣಗಳಿಂದ ವೇದ್ಯವಾಗುತ್ತದೆ. ಆದರೆ ಇಂದು ನಮ್ಮೊಳಗೇ ಯುದ್ದ ಏರ್ಪಟ್ಟಿರುವುದು ಕಂಡುಬರುತ್ತಿದೆ. ಇಂತಹ ಆಂತರ್ಯದ ಸವಾಲುಗಳಿಗೆ ಪ್ರತಿಸ್ಪಂದಿಯಾಗಿ ತುಮುಲಗಳಿಂದ ಪಾರಾಗುವಲ್ಲಿ ಸಾಹಿತ್ಯ, ಸಾಂಸ್ಕøತಿಕ ವಿಚಾರಗಳು ಔಷಧಿಯಂತೆ ನೆರವಾಗುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಕುಂಬಳೆ ಅವರು ತಿಳಿಸಿದರು.
    ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕಗಳ ಜಂಟಿ ಆಶ್ರಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ನಾರಾಯಣಮಂಗಲದಲ್ಲಿರುವ ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ ಸ್ವಗೃಹ ಶ್ರೀನಿಧಿ ನಿಲಯದಲ್ಲಿ ಬುಧವಾರ ಅಪರಾಹ್ನ ಆಯೋಜಿಸಲಾಗಿದ್ದ ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಸಾಹಿತಿ,ಪ್ರಾದ್ಯಾಪಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅವರೊಂದಿಗೆ ಜಂಟಿಯಾಗಿ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವಾತಂತ್ರ್ಯಾನಂತರ ಕಂಡ ದೇಶ ವಿಭಜನೆ ಮತ್ತು ರಾಜ್ಯ ಪುನರ್ವಿಂಗಡಣೆಯ ಮರೆಯಲ್ಲಿ ಕನ್ನಡದ ನೆಲವನ್ನು ತುಂಡರಿಸಿ ಅನ್ಯಾಯವೆಸಗಿದಂತಹ  ಎರಡು ಘಟನಾವಳಿಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು. ಅಸ್ಮಿತೆಗೆ ಒದಗುವ ವ್ಯಾಕುಲಗಳು ನಾಶಕ್ಕೆ ಕಾರಣವಾಗುವ ಸತ್ಯ ನಮ್ಮ ಕಣ್ಣಿದಿರು ಭೀತಿಗೊಳಿಸುತ್ತಿದ್ದು, ಸಾಹಿತ್ತಿಕ ಚಟುವಟಿಕೆಗಳ ಮೂಲಕ ನಿರಂತರ ಭಾಷಾ ಜಾಗೃತಿ ಸಾಧ್ಯವಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
    ಇನ್ನಬ್ಬರು ಉದ್ಘಾಟಕರಾದ ಕವಯಿತ್ರಿ, ಪ್ರಾಧ್ಯಾಪಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅವರು ಮಾತನಾಡಿ, ಕನ್ನಡ ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಹೊಸ, ಯುವ ತಲೆಮಾರುಗಳನ್ನು ರೂಪಿಸುವಲ್ಲಿ ಇಂತಹ ಸಾಹಿತ್ತಿಕ ಮೌಲ್ಯಯುತ ಕಾರ್ಯಕ್ರಮಗಳು ನಿತ್ಯ ನಡೆಯುತ್ತಿರಬೇಕು. ಆಂಗ್ಲ ಸಹಿತ ಇತರ ಭಾಷೆಗಳ ಕಲಿಕೆಗೂ ಮೊದಲು ಮಾತೃ ಭಾಷೆಯ ಗಟ್ಟಿತನ ಸುದೃಢ ವ್ಯಕ್ತಿಯಾಗಿ ನಿರ್ಮಾಣಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
    ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎಳೆಯರಿಗೆ ಭಾಷೆ, ಸಾಹಿತ್ಯ, ಸಾಂಸ್ಕøತಿಕತೆಗಳ ಮೌಲ್ಯಗಳ ಗಟ್ಟಿತನವನ್ನು ಸಮರ್ಪಕವಾಗಿ ತಿಳಿಯಪಡಿಸುವ ಚಟುವಟಿಕೆಗಳು ನಿರಂತರವಾಗಿರಬೇಕು. ಮನೆಯಿಂದ ಆರಂಭಗೊಳ್ಳುವ ಅಂತಹ ಅರಿವು ಪೂರ್ಣ ವ್ಯಕ್ತಿತ್ವ ರೂಪುಗೊಳ್ಳುವವರೆಗೆ ಲಭ್ಯವಾದಾಗ ವ್ಯಕ್ತಿ ಶಕ್ತಿಯಾಗಿ ನೆಲ, ಸಂಸ್ಕøತಿಗಳ ರಾಯಭಾರಿಯಾಗಬಲ್ಲ ಎಂದು ತಿಳಿಸಿದರು.
   ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಸೀತಾಲಕ್ಷ್ಮೀ ಕುಳಮರ್ವ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಉಪ ಸಂಚಾಲಕಿಯರಾದ ಚೇತನಾ ಕುಂಬಳೆ, ಶ್ವೇತಾ ಕಜೆ, ಸದಸ್ಯರಾದ ಆನಂದ ರೈ ಅಡ್ಕಸ್ಥಳ, ರಿತೇಶ್ ಕಿರಣ್ ಕಾಟುಕುಕ್ಕೆ, ಅಭಿಲಾಷ್ ಪೆರ್ಲ, ನಿರ್ಮಲಾ ಸೇಸಪ್ಪ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.
   ಬಳಿಕ ಹಿರಿಯ ಸಾಮಾಜಿಕ, ಧಾರ್ಮಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಅವರಿಂದ ದಸರಾ ನಾಡಹಬ್ಬ ವಿಶೇಷೋಪನ್ಯಾಸ ನಡೆಯಿತು. ಅಲ್ಲದೆ ಯುವ ಪ್ರತಿಭಾನ್ವಿತ ಬಹುಮುಖ ಪ್ರತಿಭೆ ಶ್ರದ್ದಾ ನಾಯರ್ಪಳ್ಳ ಅವರಿಂದ ಚಂದ್ರಹಾಸ ಚರಿತ್ರೆಯ ಆಯ್ದ ಭಾಗದ ಗಮಕ ವಾಚನ-ವ್ಯಾಖ್ಯಾನ ನಡೆಯಿತು.
                ಆನಂದ ರೈ ಅಡ್ಕಸ್ಥಳ ಸ್ವಾಗತಿಸಿ,ಪುರುಷೋತ್ತಮ ಭಟ್ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಗಮಕ ಕಲಾ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಸಿರಿಗನ್ನಡ ವೇದಿಕೆ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ.ಗೋಪಾಲಕೃಷ್ಣ ಭಟ್, ಸಂಘಟಕ ಜಯ ಮಣಿಯಂಪಾರೆ,ಪುಸ್ತಕ ಪ್ರಕಾಶಕರಾದ ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ವಿಜಯಾಸುಬ್ರಹ್ಮಣ್ಯ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಯುವ ಕವಯಿತ್ರಿ ಪರಿಣಿತ ರವಿ ಎಡನಾಡು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಸತ್ಯವತಿ ಕೊಳಚಪ್ಪು ಚಾಲನೆ ನೀಡಿದರು. ಸುಮಾರು 20 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries