ತಿರುವನಂತಪುರ: ಪಾಲಕ್ಕಾಡ್ ಅಟ್ಟಪ್ಪಾಡಿ ವಲಯದ ಮಂಜಿಕಂಡಿ ಅರಣ್ಯಪ್ರದೇಶದಲ್ಲಿ ನಾಲ್ವರು ನಕ್ಸಲರನ್ನು ನಕಲಿ ಎನ್‍ಕೌಂಟರ್ ಮೂಲಕ ಹತ್ಯೆಗೈಯಲಾಗಿದೆ ಎಂದು ಸರ್ಕಾರದ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾದ ಸಿಪಿಐ ತಿಳಿಸಿದೆ. ನಕ್ಸಲ್ ವಿರುದ್ಧ ಥಂಡರ್ ಬೋಲ್ಟ್ ನಡೆಸಿದ ಕಾರ್ಯಾಚರಣೆಯನ್ನು ಪ್ರತಿಪಕ್ಷಗಳು ಟೀಕಿಸಿದ್ದು, ಸರ್ಕಾರ ತನ್ನ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ನಡೆಸಿದ ತಂತ್ರ ಇದಾಗಿದೆ ಎಂದು ಆರೋಪಿಸಿದೆ. ಪ್ರಸಕ್ತ ಇದೇ ಆರೋಪವನ್ನು ಎಡರಂಗದ ಪ್ರಮುಖ ಪಕ್ಷವೊಂದು ಹೇರುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ನಾಲ್ಕು ಮಂದಿ ನಕ್ಸಲರ ಹತ್ಯೆಯನ್ನು ಸಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಪ್ರಬಲವಾಗಿ ವಿರೋಧಿಸಿದ್ದು, ಮುಖ್ಯಮಂತ್ರಿಯ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಕಾಡಿನಲ್ಲಿ ಆಹಾರ ಸೇವಿಸುತ್ತಿದ್ದ ನಕ್ಸಲರನ್ನು ಅತ್ಯಂತ ಸನಿಹದಿಂದ ಥಂಡರ್‍ಬೋಲ್ಟ್ ಪಡೆ ಗುಂಡುಹಾರಿಸಿ ಕೊಲೆ ನಡೆಸಿದೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕು ಎಂದೂ ಆಗ್ರಹಿಸಿದ್ದಾರೆ. ನಕ್ಸಲರು ಎತ್ತಿಹಿಡಿಯುತ್ತಿರುವ ಧೋರಣೆಗೆ ಗುಂಡೇಟು ಎಂದಿಗೂ ಪರಿಹಾರವಾಗದು ಎಂಬುದಾಗಿ ಸಿಪಿಐ ಪ್ರಕಟಿಸಿರುವ ಠರಾವಿನಲ್ಲಿ ತಿಳಿಸಿದೆ.
ನಕ್ಸಲ್ ವಿರುದ್ಧ ಕಾರ್ಯಾಚರಣೆ ಪಡೆ ಥಂಡರ್ ಬೋಲ್ಟ್ ಹಾಗೂ ಪೊಲೀಸರು ನಡೆಸಿದ ಕಾಯಾಚರಣೆಯಲ್ಲಿ ರಮಾ, ಅರವಿಂದ್, ಕಾರ್ತಿಕ್ ಹಾಗೂ ಮಣಿವಾಸಗಂ ಮೃತಪಟ್ಟಿದ್ದು, ಇವರೆಲ್ಲರೂ ತಮಿಳ್ನಾಡು ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ. ನಕ್ಸಲರು ಸೇವಿಸಲು ತಯಾರಿಸಿದ್ದ ಜಿಂಕೆ ಮಾಂಸದ ಪದಾರ್ಥ ಹಾಗೂ ಹಸಿ ಮಾಂಸವನ್ನೂ ಪತ್ತೆಹಚ್ಚಿರುವುದಾಗಿ ಕಾರ್ಯಾಚರಣೆ ಪಡೆ ತಿಳಿಸಿತ್ತು.
ಪೊಲೀಸ್ ಠಾಣೆಗಳಲ್ಲಿ ಲಾಕಪ್ ಸಾವುಗಳಿಂದ ಕುಖ್ಯಾತಿ ಪಡೆದಿರುವ ಕೇರಳ ಗೃಹ ಇಲಾಖೆ, ನಕಲಿ ಎನ್‍ಕೌಂಟರ್ ಆರೋಪವನ್ನೂ ಎದುರಿಸುವಂತಾಗಿದೆ ಎಂದು ಪ್ರತಿಪಕ್ಷಗಳು ತಿಳಿಸಿದೆ.