ಕಾಸರಗೋಡು: ಕಂಬಾರು ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಉಪಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಸದಾಶಿವ ಪೊಯ್ಯೆ ರಚಿಸಿ ಶಾಲೆಯ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ಮತ್ತು ಸದಾಶಿವ ಪೊಯ್ಯೆ ಜತೆಯಾಗಿ ನಿರ್ದೇಶಿಸಿದ `ಪ್ರಾಣ-ವಾಯು' ವಿಜ್ಞಾನ ನಾಟಕ ಉಪಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಪ್ರಕೃತಿಯ ವಿಪರೀತ ಶೋಷಣೆ, ಬರಡಾಗುತ್ತಿರುವ ಭೂಮಿ, ದಾಹಜಲ ಸಿಗದೆ ಮನುಷ್ಯ-ಮನುಷ್ಯರ ರಕ್ತ ಕುಡಿಯುವ ಜನರು, ಪ್ರಾಣವಾಯುವಿಗಾಗಿ ಪರದಾಡುವ ಸ್ಥಿತಿ, ಅದಿಲ್ಲದೆ ಜನರನ್ನು ಅರ್ಧಾಯುಷ್ಯದಿಂದಲೇ ಕೊಲ್ಲುವ ಮುಂದಿನ ಯುಗದ ಚಿಂತನೆಯೊಂದಿಗೆ ಮುಂದುವರಿಯುವ ನಾಟಕ. ಪ್ರಕೃತಿಯ ನಿಯಮಗಳನ್ನು ಬದಲಾಯಿಸುವ ಸಂಶೋಧನೆ ನಮಗೆ ಬೇಕಾಗಿಲ್ಲ, ಪ್ರಕೃತಿ ಸ್ನೇಹಿ ಸಂಶೋಧನೆಗಳ ಅಗತ್ಯವನ್ನು ಪ್ರಾಣವಾಯು ನಾಟಕದ ಮೂಲಕ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಮಕ್ಕಳು ಯಶಸ್ವಿಯಾದರು. ನಾಟಕದ ಕಥಾನಾಯಕಿ ಕಾಡ ಹುಡುಗಿ ಬೆಳ್ಳಿಯಾಗಿ ಅಭಿನಯಿಸಿದ ನಿಧಿ ಆರ್. ಶೆಟ್ಟಿ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ರಂಗಪರಿಕರಗಳಲ್ಲಿ ರಾಜ್‍ಕುಮಾರ್ ಕಾಟುಕುಕ್ಕೆ, ಶಾಲಾ ಅಧ್ಯಾಪಿಕೆ ವಿದ್ಯಾ ಸರಸ್ವತಿ ಟೀಚರ್ ಸಹಕರಿಸಿದರು. ವಿಜ್ಞಾನ ನಾಟಕೋತ್ಸವದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿ ತಂಡವನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು.