ಮುಳ್ಳೇರಿಯ: ಬೇಕಲ ಫಿಶರೀಶ್ ಹೈಸ್ಕೂಲ್ ಮತ್ತು ಉದುಮ ಹೈಯರ್ ಸೆಕೆಂಡರಿ ಶಾಲೆಯ ಸಮಾಜ ವಿಜ್ಞಾನ ಅಧ್ಯಾಪಕ ಹುದ್ದೆಗೆ ಕನ್ನಡ ಅರಿಯದ ಮಲಯಾಳ ಅಧ್ಯಾಪಕರ ನೇಮಕ ಆದೇಶದ ವಿರುದ್ಧ ವಿದ್ಯಾರ್ಥಿಗಳ ಹೆತ್ತವರು, ಕನ್ನಡ ಭಾಷಾಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಉದುಮ, ಬೇಕಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ರಕ್ಷಕ ಸಂಘದ ನೇತೃತ್ವದಲ್ಲಿ ಬಟ್ಟತ್ತೂರು ಪಂಜಿಕುಳ ಶ್ರೀ ಪಾರ್ಥಸಾರಥಿ ಸೇವಾ ಮಂದಿರದಲ್ಲಿ ಇತ್ತೀಚೆಗೆ ವಿಶೇಷ ಸಭೆ ನಡೆಯಿತು. ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಕನ್ನಡ ಅರಿಯದ ಅಧ್ಯಾಪಕರು ಶಾಲೆಗೆ ಬಂದರೆ ಅವರಿಗೆ ಅನುವು ಮಾಡಿಕೊಡುವುದಿಲ್ಲ. ಇದರ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವರು. ಈ ಸಮಿತಿಯ ಆಶ್ರಯದಲ್ಲಿ ಶಾಲಾ ಮುಖ್ಯ ಶಿಕ್ಷಕ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ, ಉದುಮ ಗ್ರಾ.ಪಂ. ಅಧ್ಯಕ್ಷ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ನೀಡಲು ತೀರ್ಮಾನಿಸಲಾಯಿತು. ಅಲ್ಲದೇ ಪ್ರತಿನಿಧಿಗಳ ನೇತೃತ್ವದಲ್ಲಿ ಘಟನೆಯ ಬಗ್ಗೆ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕ, ಜಿಲ್ಲಾ ವಿದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ಸಭೆಯಲ್ಲಿ ನಿವೃತ್ತ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ವಾಸುದೇವ ಪನೆಯಾಲ ಅಧ್ಯಕ್ಷತೆ ವಹಿಸಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಉದುಮ-ಬೇಕಲ ಸರ್ಕಾರಿ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ರಕ್ಷಕರ ಸಂಘವನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ವಾಸುದೇವ ಪನೆಯಾಲ, ಅಧ್ಯಕ್ಷರಾಗಿ ಶಂಕರ ನೆಕ್ಲಿ, ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್, ಕಾರ್ಯದರ್ಶಿಯಾಗಿ ಮನಮೋಹನ್ ನೆಕ್ಲಿ, ಜೊತೆ ಕಾರ್ಯದರ್ಶಿಯಾಗಿ ರಮೇಶ, ಕೋಶಾಧಿಕಾರಿಯಾಗಿ ಪ್ರಕಾಶ್ ಬಂಗಾಳು ಹಾಗೂ 25 ಮಂದಿಯ ಕಾರ್ಯಕಾರಿ ಸಮಿತಿಗೆ ರೂಪು ನೀಡಲಾಯಿತು.