ಮುಳ್ಳೇರಿಯ: ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ದೇಲಂಪಾಡಿ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಅಂಗನವಾಡಿ ನೌಕರೆಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ರೋಟ್ಟ ವೈರಸ್ ವ್ಯಾಕ್ಸಿನೇಷನ್ ತರಬೇತಿ ಮಂಗಳವಾರ ನಡೆಯಿತು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ಉದ್ಘಾಟಿಸಿದರು. ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸರಳಾ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಆರೋಗ್ಯ ಪರಿವೀಕ್ಷಕ ಕೆ.ಸುರೇಶ್ ಕುಮಾರ್, ಕಿರಿಯ ಆರೋಗ್ಯ ಪರಿವೀಕ್ಷಕ ಅಬ್ದುಲ್ ರಹಮಾನ್, ನಿಥಿನ್ ಆರ್.ವಿ., ಕಿರಿಯ ಸಾರ್ವಜನಿಕ ಆರೋಗ್ಯ ದಾದಿಯರಾದ ಜಯಲಕ್ಷ್ಮಿ, ಸುಲೈಖಾ, ಜಿಲ್ಸಿ, ದೀಪಾ ಮೋಳ್ ಉಪಸ್ಥಿತರಿದ್ದರು.
ಏನಿದು ವೈರಸ್?:
ಶಿಶುಗಳಿಗೆ, ಮಕ್ಕಳಿಗೆ ಜಲೋದರ ರೋಗ ತಲೆದೋರಲು ರೋಟ್ಟ ವೈರಸ್ ಕಾರಣವಾಗಿದ್ದು, ಇದು ರಿಯೋವಿರಿಡೆ ಎಂಬ ಪಂಗಡಕ್ಕೆ ಸೇರಿದ ಒಂದು ಅರ್.ಎನ್.ಎ. ವೈರಸ್ ಆಗಿದೆ. ಸರಿಸುಮಾರು 5 ವರ್ಷ ಪ್ರಾಯ ಪೂರ್ಣಗೊಂಡ ವೇಳೆ ವಿಶ್ವದ ಎಲ್ಲ ಮಕ್ಕಳಿಗೂ ಕನಿಷ್ಠ ಒಂದು ಬಾರಿ ಈ ವೈರಸ್ ನ ಸೋಂಕು ತಗುಲುತ್ತದೆ. ಆಹಾರ ಮತ್ತು ನೀರಿನ ಮೂಲಕ ಈ ವೈರಸ್ ಮಕ್ಕಳ ದೇಹ ಪ್ರವೇಶ ಮಾಡುತ್ತದೆ. 1973ರಲ್ಲಿ ರೋಟ್ಟ ವೈರಸ್ ಪತ್ತೆಯಾಗಿತ್ತು. ವಿಶ್ವಾದ್ಯಂತ 5 ವರ್ಷಕ್ಕಿಂತ ಕಳೆಗಿನ ಸುಮಾರು 5 ಲಕ್ಷಕ್ಕೂ ಅಧಿಕ ಮಕ್ಕಳು ಪ್ರತಿ ವರ್ಷ ರೋಟ್ಟ ವೈರಸ್ ಬಾಧೆಗೆ ಬಲಿಯಾಗುತ್ತಿದ್ದಾರೆ.