ನವದೆಹಲಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅರ 144ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ಏಕತಾ ದಿನ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹಸಚಿವ ಅಮಿತ್ ಶಾ ರಾಷ್ಟ್ರ ರಾಜಧಾನಿಯ ಪಟೇಲ್ ಚೌಕ್ ನಲ್ಲಿ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಪ್ರಧಾನಿ ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿರುವ ಕೇವಾಡಿಯಾದ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಸ್ವಾತಂತ್ರ್ಯಾನಂತರ ಒಗ್ಗೂಡಿಸಿದ ಕೀರ್ತಿಗೆ ಪಾತ್ರರಾಗಿರುವ ಪಟೇಲ್ ಅವರಿಗೆ ಗೌರವ ಸಮರ್ಪಣೆಯ ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಹರದೀಪ್ ಪುರಿ, ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಮುಂತಾದವರು ಭಾಗಿಯಾಗಿದ್ದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು 2014ರಿಂದ ಎನ್ ಡಿಎ ಸರ್ಕಾರ ರಾಷ್ಟ್ರೀಯ ಏಕ್ತಾದಿವಸ್ ಅಥವಾ ರಾಷ್ಟ್ರೀಯ ಏಕತಾ ದಿನವೆಂದು ಆಚರಿಸಿಕೊಂಡು ಬಂದಿದೆ. ರಾಷ್ಟ್ರದ ಬಲವನ್ನು ಏಕತೆ ಮತ್ತು ಸಮಗ್ರತೆಯಿಂದ ಪುನರ್ ದೃಢೀಕರಿಸಲು ಈ ಸಂದರ್ಭದಲ್ಲಿ ಏಕತೆಗಾಗಿ ಓಟವನ್ನು ಸಹ ಆಯೋಜಿಸಲಾಗುತ್ತಿದೆ.