HEALTH TIPS

ರಾಜಕೀಯ ಪ್ರಭಾವ ಅವ್ಯವಹಾರಗಳ ವಾಸನೆ-ಕನ್ನಡಿಗರ ಪಾಲಿಗೆ ದುಷ್ಮನ್ ಆಗಿರುವ ಕೇರಳ ಪಿ.ಎಸ್.ಸಿ.

 
     ಕುಂಬಳೆ: ಬೇರೆ ರಾಜ್ಯಗಳ ಲೋಕಸೇವಾ ಆಯೋಗಗಳಿಗೆ ಹೋಲಿಸಿದರೆ ಕೇರಳ ಪಿ.ಎಸ್.ಸಿ. ಪಾರದರ್ಶಕವಾಗಿದೆ. ರಾಜಕೀಯ ಪ್ರಭಾವ, ಭ್ರಷ್ಟಾಚಾರ, ಸ್ವಜನಪಕ್ಷಪಾತಗಳ ಸೋಂಕಿಲ್ಲದೆ ನಿಜವಾದ ಅರ್ಹತೆಯುಳ್ಳ ಅಭ್ಯರ್ಥಿಗಳನ್ನು ಆರಿಸುತ್ತಿದೆ ಎಂದು ಕಾಸರಗೋಡಿನ ಕನ್ನಡಿಗರು ಕೂಡ ಅಭಿಮಾನದಿಂದ ಹೇಳುತ್ತಿದ್ದ ಕಾಲವೊಂದಿತ್ತು. ಆದರೆ ಈಚೆಗಿನ ಘಟನೆಗಳನ್ನು ಗಮನಿಸಿದರೆ ಕೇರಳ ಪಿ.ಎಸ್.ಸಿ. ಯೆಂಬುದು ಅವ್ಯವಹಾರ ಹಾಗೂ ಮೋಸದಾಟಗಳ ಗೂಡಾಗಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಈಗಿನ ಪಿ.ಎಸ್.ಸಿ. ಸದಸ್ಯರು ಹಾಗೂ ಅಧಿಕಾರಿಗಳು ಶುದ್ಧಹಸ್ತವುಳ್ಳವರೇ, ರಾಜಕೀಯ ಪ್ರಭಾವಗಳಿಗೆ ಮಣಿಯದವರೇ ಎಂದು ಜನರು ಪ್ರಶ್ನಿಸಲು ಆರಂಭಿಸಿದ್ದಾರೆ. ಪಿ.ಎಸ್.ಸಿ. ಯ ವಿಶ್ವಾಸಾರ್ಹತೆ ಕಳೆಯುವಂತಹ ಘಟನೆಗಳು ರಾಜ್ಯಮಟ್ಟದಲ್ಲೂ ಸಾಕಷ್ಟು ಜರಗುತ್ತಿವೆ.
    ರಾಜ್ಯಮಟ್ಟದ ಮಲಯಾಳಿ ಮಾಧ್ಯಮಗಳು ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಪರಿಣಾಮವಾಗಿ ಕಾಸರಗೋಡಿನ ಕನ್ನಡಿಗರ ಬಗ್ಗೆ ಕೇರಳ ಪಿ.ಎಸ್.ಸಿ. ನಡೆಸುತ್ತಿರುವ ವಂಚನೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿಲ್ಲ ಅಷ್ಟೆ.
ಹಾಗೆ ನೋಡಿದರೆ ಕೇರಳ ಪಿ.ಎಸ್.ಸಿ. ಅಧ್ಯಕ್ಷರಿಗೆ ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಯ ಮಹತ್ವದ ಹೊಣೆಗಾರಿಕೆಯೇ ಇದೆ. ಸಾಂವಿಧಾನಿಕವಾಗಿ ರಚನೆಯಾದ, ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯಮಟ್ಟದ ಭಾಷಾ ಅಲ್ಪಸಂಖ್ಯಾಕ ಆಯೋಗದ ಸದಸ್ಯರಾಗಿ ಕೇರಳ ಪಿ.ಎಸ್.ಸಿ.ಯ ಪ್ರತಿನಿಧಿ ಇದ್ದಾರೆ. ಆದರೆ ಹಿಂದಿನಿಂದಲೂ ಕೇರಳ ಪಿ.ಎಸ್.ಸಿ. ಭಾಷಾ ಅಲ್ಪಸಂಖ್ಯಾಕರಿಗೆ ಮೋಸ ಮಾಡುತ್ತಲೇ ಬಂದಿದೆ. ಭಾಷಿಕ ಪಕ್ಷಪಾತ ನಡೆಸಿ ಕನ್ನಡಿಗ ಉದ್ಯೋಗಾರ್ಥಿಗಳಿಗೆ  ನ್ಯಾಯೋಚಿತ ಅವಕಾಶ ನಿರಾಕರಿಸಿ ಕನ್ನಡಿಗರಿಗೆ ಅವಕಾಶವಿರುವ ಹುದ್ದೆಗಳಿಗೂ ಕನ್ನಡ ಅರಿಯದ ತೆಂಕಣದ ಮಲಯಾಳಿಗಳು ಆಯ್ಕೆಯಾಗುವಂತೆ ತೆಂಕಣಿಗರಿಗೆ ಅನುಕೂಲ ಮಾಡಿಕೊಡುವ ಕುಟಿಲ ನೀತಿಯನ್ನು ಪಿ.ಎಸ್.ಸಿ. ಅನುಸರಿಸುತ್ತಿದೆ. ಇದರ ವಿರುದ್ಧ ಕನ್ನಡಿಗರು ನಿರಂತರ  ಹೋರಾಟ ನಡೆಸಿದ್ದಾರೆ. ಕನ್ನಡಿಗ ಮುಖಂಡರಾದ ದಿ.ಯು.ಪಿ.ಕುಣಿಕುಳ್ಳಾಯರಂತಹವರು ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರ ನ್ಯಾಯೋಚಿತ ಅವಕಾಶಗಳಿಗಾಗಿ ಪಿ.ಎಸ್.ಸಿ. ವಿರುದ್ಧ ನ್ಯಾಯಾಂಗ ಹೋರಾಟ ನಡೆಸಬೇಕಾಯಿತು. ಪಿ.ಎಸ್.ಸಿ. ಏಕಪಕ್ಷೀಯವಾಗಿ ಮಲಯಾಳ ಕಡ್ಡಾಯ ಮಾಡಿದಾಗ ಬಿ.ಜೆ.ಪಿ. ಮೊದಲಾದ ರಾಜಕೀಯ ಪಕ್ಷಗಳು ಕನ್ನಡಿಗರ ಪರವಾಗಿ ನಿಂತು ನ್ಯಾಯವೊದಗಿಸಿದ್ದವು. ಹಾಗಿದ್ದರೂ ಕನ್ನಡಿಗರ ಬಗ್ಗೆ ಪಿ.ಎಸ್.ಸಿ. ಯ ಮಲತಾಯಿ ಧೋರಣೆ ಮುಂದುವರಿಯುತ್ತಲೇ ಇದೆ.
      ಕನ್ನಡ ಶಾಲೆಗಳಿಗೆ ಕನ್ನಡ ಅರಿಯದ ಅಧ್ಯಾಪಕರ ನೇಮಕ :
    ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ಕನ್ನಡದ ಪ್ರಾಥಮಿಕ ಜ್ಞಾನವಾದರೂ ಇರಬೇಕೆಂಬುದು ಸಾಮಾನ್ಯ ಅನಕ್ಷರಸ್ಥ ವ್ಯಕ್ತಿಗೂ ಮನದಟ್ಟಾಗುವ ವಿಷಯ. ಆದರೆ ಕನ್ನಡ ಮಾಧ್ಯಮ ಶಿಕ್ಷಕರನ್ನು ಆಯ್ಕೆ ಮಾಡಲು ಆಗಮಿಸುವ ಪಿ.ಎಸ್.ಸಿ.ಯ ಬೋರ್ಡ್ ಮೆಂಬರ್‍ಗಳೆಂಬ ಬೃಹಸ್ಪತಿಗಳಿಗೆ ಈ ಸಾಮಾನ್ಯ ಜ್ಞಾನವೂ ಇಲ್ಲ. ಸಂದರ್ಶನದ ವೇಳೆ ಅಭ್ಯರ್ಥಿಗೆ ಕನ್ನಡ ಜ್ಞಾನವಿಲ್ಲದಿದ್ದರೆ ಆತನನ್ನು ಅನರ್ಹಗೊಳಿಸಬೇಕೆಂದು ಪಿ.ಎಸ್.ಸಿ. ಯ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿದ್ದರೂ, ಬಹಳ ಜಾಗ್ರತೆ ವಹಿಸಿ ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗಳಿಗೆ ಕನ್ನಡಬಲ್ಲ  ಶಿಕ್ಷಕರನ್ನೇ ಆರಿಸಬೇಕೆಂದು ಕೇರಳ ಉಚ್ಛ ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಈ ಬಾರಿ ಸುಮಾರು 23 ರಷ್ಟು ಕನ್ನಡ ಅರಿಯದ ಶಿಕ್ಷಕರನ್ನು ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯಲ್ಲಿದ್ದವರಿಗೆ ಈ ಕನ್ನಡ ಬಾರದ ಶಿಕ್ಷಕರಿಂದ ಪಾಠ ಕೇಳಿಸಿಕೊಳ್ಳಬೇಕಾದ ಸರ್ಕಾರಿ ಶಾಲೆಗಳ ಬಡ ಕನ್ನಡ ಮಕ್ಕಳ ಭವಿಷ್ಯ ನೆನಪಾಗಲಿಲ್ಲ. ಆಯ್ಕೆ ಸಮಿತಿಯಲ್ಲಿದ್ದ ಕನ್ನಡದ ಹೆಸರಿನಲ್ಲೇ ಹೊಟ್ಟೆಹೊರೆಯುತ್ತಿರುವ ಕನ್ನಡ ಭಾಷಾತಜ್ಞರೆನ್ನುವ ಪ್ರಾಧ್ಯಾಪಕರಿಗೂ ಕನ್ನಡ ಮಕ್ಕಳಿಗೆ ಕಲಿಸಲು ಕನ್ನಡ ಅರಿಯದ ಶಿಕ್ಷಕರ ಆಯ್ಕೆ ಸರಿಯಲ್ಲ ಎನ್ನಲು ನಾಲಗೆ ಏಳಲಿಲ್ಲ. ಕೇರಳ ಸರ್ಕಾರವಂತೂ ಇದು ಯಾರದೋ ಅಧಿಕಾರಿಗಳ ತಪ್ಪು ಎಂದು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆಯಲ್ಲದೆ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷಿಸಲು, ಅನರ್ಹ ಶಿಕ್ಷಕರಿಂದ ಪಾರುಮಾಡಿ ಕನ್ನಡ ಮಕ್ಕಳಿಗೆ ನ್ಯಾಯವೊದಗಿಸಲು ಮುಂದಾಗುತ್ತಿಲ್ಲ.
     ಎಲ್.ಡಿ. ಕ್ಲರ್ಕ್ ಪರೀಕ್ಷೆಯಲ್ಲೂ ಅನ್ಯಾಯ :
   ಪಿ.ಎಸ್.ಸಿ. ಒದಗಿಸುತ್ತಿರುವ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳ ಸರಮಾಲೆಯೇ ಕಂಡುಬರುತ್ತಿದೆ. ಇದರ ವಿರುದ್ಧ ಉದ್ಯೋಗಾರ್ಥಿಗಳು ಎಷ್ಟು ದೂರು ನೀಡಿದರೂ ಸರಿಪಡಿಸುತ್ತಿಲ್ಲ. ಕನ್ನಡಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವನ್ನು ಅನುಸರಿಸಲಾಗುತ್ತಿದೆ. ಉದ್ಯೋಗಾರ್ಥಿಗಳಿಗೆ ಕನ್ನಡದಲ್ಲಿ ಸೂಚನೆಗಳನ್ನು ಒದಗಿಸುವುದಿಲ್ಲ. ಕೆಲವೊಮ್ಮೆ ಪ್ರಶ್ನೆಪತ್ರಿಕೆಗಳೂ ಕನ್ನಡದಲ್ಲಿ ದೊರೆಯುವುದಿಲ್ಲ. ಕನ್ನಡದ ಹುದ್ದೆಗಳ ಸಂದರ್ಶನವನ್ನು ದೂರದ ತಿರುವನಂತಪುರದಲ್ಲಿ ನಡೆಸಲಾಗುತ್ತಿದೆ. ಹೀಗೆ ಪಿ.ಎಸ್.ಸಿ. ಕನ್ನಡ ಉದ್ಯೋಗಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಬರೆದರೆ ಮಗಿಯದಷ್ಟಿದೆ. ಈ ಬಾರಿಯ ಕನ್ನಡ ಮಲಯಾಳ ಬಲ್ಲ ಗುಮಾಸ್ತ ಪರೀಕ್ಷೆಯಲ್ಲಿ ಬಹುಪಾಲು ಅಂದರೆ ಶೇ.60 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಮಲಯಾಳದಲ್ಲಿ ಕೇಳುವ ಮೂಲಕ ಕನ್ನಡ ಅಭ್ಯರ್ಥಿಗಳಿಗಿಂತ ಕನ್ನಡ ಬಾರದ ಮಲಯಾಳ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿ ಆಯ್ಕೆಯಾಗುವಂತೆ ಮಾಡಲು ಪಿ.ಎಸ್.ಸಿ. ಸಂಚು ನಡೆಸಿದ್ದು ಬಯಲಾಗಿದೆ. ಇದರ ವಿರುದ್ಧ ಕನ್ನಡ ಉದ್ಯೋಗಾರ್ಥಿಗಳು ಬೃಹತ್ ಪ್ರತಿ`Àಟನೆ ನಡೆಸಿದ್ದಾರೆ. ಪರೀಕ್ಷೆಯನ್ನು ರದ್ದುಮಾಡಿ ನ್ಯಾಯೋಚಿತವಾಗಿ ಮರುಪರೀಕ್ಷೆ ನಡೆಸಬೇಕು. ಕನ್ನಡ ಮಲಯಾಳ ಎಲ್.ಡಿ. ಕ್ಲರ್ಕ್ ಹುದ್ದೆಯ ಮೂಲ ಅರ್ಹತೆಯಲ್ಲಿ ಹತ್ತನೇ ತರಗತಿ ತನಕ ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಸೇರಿಸಬೇಕು. ಹಾಗಾದರೆ ಮಾತ್ರ ಕನ್ನಡ ಹುದ್ದೆಗಳಿಗೆ ಕನ್ನಡ ಅರಿಯದವರ ನೇಮಕಾತಿಯನ್ನು ತಡೆಗಟ್ಟಬಹುದೆಂಬುದು ಉದ್ಯೋಗಾರ್ಥಿಗಳ ಅಭಿಮತ.
ತಾನು ಸ್ವತಂತ್ರವಾದ ಆಯೋಗ ಎಂದು ಎಷ್ಟೇ ಹೇಳಿಕೊಂಡರೂ ಪಿ.ಎಸ್.ಸಿ. ರಾಜಕೀಯ ಮುಕ್ತವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆಳುವ ರಾಜಕೀಯ ಪಕ್ಷಕ್ಕೆ ಸೇರಿದವರನ್ನು ಅಥವಾ ಆಳುವ ಪಕ್ಷಕ್ಕೆ ಅವರ ನಿಷ್ಠೆಯ ಆಧಾರದಲ್ಲಿ  ಪಿ.ಎಸ್.ಸಿ. ಮೆಂಬರ್‍ಗಳನ್ನು ನೇಮಿಸಲಾಗುತ್ತಿರುವುದು ಗುಟ್ಟಿನ ವಿಷಯವಲ್ಲ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಮೇಲೆ ಕೇರಳದ ಆಡಳಿತ ಪಕ್ಷದ ಹಾಗೂ ಸರ್ಕಾರದ ಮಲತಾಯಿ ಧೋರಣೆ ಬದಲಾದರೆ ಮಾತ್ರ ಪಿ.ಎಸ್.ಸಿ. ಯ ಧೋರಣೆಯಲ್ಲೂ ಬದಲಾವಣೆಯನ್ನು ನಿರೀಕ್ಷಿಸಬಹುದು. ಕನ್ನಡ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ಆಯ್ಕೆಯನ್ನು ಮೌನವಾಗಿ ಪೆÇ್ರೀತ್ಸಾಹಿಸುತ್ತ ಕನ್ನಡ ಮಕ್ಕಳ ಸಮಸ್ಯೆಗೆ ಯಾವುದೇ ಸಮರ್ಪಕ ಪರಿಹಾರ ಕಂಡುಕೊಳ್ಳದ  ಸರಕಾರದಿಂದ ಕನ್ನಡಿಗರು ನ್ಯಾಯವನ್ನು ನಿರೀಕ್ಷಿಸಬಹುದೆ?

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries