ನವದೆಹಲಿ: ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋನ್ ಕಣ್ಗಾವಲು ಇಡಲಾಗಿದೆ ಎಂದರು. ಸೋಮವಾರದಿಂದ ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಪ್ರಾರಂಭವಾಗಲಿದ್ದು ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ. ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದಿಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಸ್ಥಳೀಯ ಗುಪ್ತಚರ ಘಟಗಳಿಗೆ ನಿರ್ದೇಶಿಸಲಾಗಿದೆ.
ನವೆಂಬರ್ ನಲ್ಲಿ ರಾಮ ಜನ್ಮಭೂಮಿ ವಿವಾದದ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.