ಕುಂಬಳೆ: ಅಭಿವೃದ್ದಿಯ ಹೆಸರಲ್ಲಿ ಯುಡಿಎಫ್ ಹಾಗೂ ಎಲ್ ಡಿ ಎಫ್ ಪಕ್ಷಗಳು ಜನರಿಗೆ ಎಸಗುತ್ತಿರುವ ದ್ರೋಹಗಳಿಗೆ ಈ ಬಾರಿಯ ಉಪಚುನಾವಣೆಯಲ್ಲಿ ಜನರು ಉತ್ತರಿಸುವ ಅಗತ್ಯವಿದೆ. ಜನವಂಚನೆಯ ಆಡಳಿತದಿಂದ ಅಭಿವೃದ್ದಿಯಲ್ಲಿ ಮಂಜೇಶ್ವರ ಕ್ಷೇತ್ರ ಹಿಂದುಳಿದಿರುವುದರ ಹಿಂದೆ ಎಡ-ಬಲ ಪಕ್ಷಗಳ ಅಪಕ್ವ ಧೋರಣೆ, ಕಾಳಜಿ ರಹಿತ ಆಡಳಿತ ತಂತ್ರಗಳು ಕಾರಣ ಎಂದು ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಎಂ.ವೇಲಾಯುಧನ್ ಅವರು ತಿಳಿಸಿದರು.
ಮಂಜೇಶ್ವರ ಉಪ ಚುನಾವಣೆಯ ಪೂರ್ವಭಾವಿಯಾಗಿ ಕುಂಬಳೆಯಲ್ಲಿರುವ ಎನ್ ಡಿ ಎ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗ-ವಿಭಾಗಗಳ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಎಡ-ಬಲ ರಂಗಗಳಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಶೋಷಿತರ ಬಗ್ಗೆ ಕಾಳಜಿ ಹುಟ್ಟಿಕೊಳ್ಳುತ್ತದೆ. ಅಂತಹ ಧೋರಣೆಯ ಹಿಂದಿನ ಸತ್ಯವನ್ನು ನಾವಿಂದು ಅರ್ಥೈಸುವ ಅಗತ್ಯ ಇದ್ದು, ಇನ್ನಾದರೂ ಜಾಗೃತರಾಗದಿದ್ದಲ್ಲಿ ಭಾರೀ ಅಪಾಯಗಳು ಸಂಭವಿಸಲಿದೆ ಎಂದು ಅವರು ತಿಳಿಸಿದರು. ಹಿಂದುಳಿದ ವರ್ಗ, ವಿಭಾಗಗಳ ಸಮಗ್ರ ವಿಕಸನಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳು ಮಂಜೇಶ್ವರ ವಿಧಾನ ಸಭಾ ವ್ಯಾಪ್ತಿಗೆ ಇನ್ನೂ ಲಭ್ಯವಾಗದಿರುವುದು ಕುಟಿಲ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದಾಗಿದೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ಕಾಲಾಕಾಲಕ್ಕೆ ನೀಡಬೇಕಾದ ವರದಿಗಳನ್ನು ಸಮರ್ಪಿಸದೆ ಬಿಜೆಪಿಯ ವರ್ಚಸ್ಸನ್ನು ಕಸಿಯಲು ಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಂಯೋಜಕ ರಂಜಿತ್ ಕಣ್ಣೂರ್, ಪ.ಜಾತಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎ.ಕೆ.ಕಯ್ಯಾರ್, ಜಿಲ್ಲಾಧ್ಯಕ್ಷ ಸಂಪತ್ ಪೆರ್ನಡ್ಕ, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅವಿನ್ ಮಾಯಿಪ್ಪಾಡಿ ಸ್ವಾಗತಿಸಿ, ನಾರಾಯಣ ವಂದಿಸಿದರು.